ಭಾರತದ ಟಿ20 ವಿಶ್ವಕಪ್ ತಂಡ : ದಿನೇಶ್ ಕಾರ್ತಿಕ್ ಗೆ ಅವಕಾಶ ಸಿಗುವುದೇ?
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ತಾನೇಕೆ ವಿಶ್ವದ ಓರ್ವ ಶ್ರೇಷ್ಠ ಫಿನಿಶರ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 287 ರನ್ ಗುರಿ ಬೆನ್ನಟ್ಟುವಾಗ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಗಳಿಸಿದ್ದರು. ಆದರೆ ಅವರ ಪ್ರಯತ್ನ ಆರ್ ಸಿಬಿಗೆ ಗೆಲುವು ತಂದುಕೊಡಲಿಲ್ಲ. ಅನುಭವಿ ಬ್ಯಾಟರ್ ಕಾರ್ತಿಕ್ ರ ಫಿನಿಶಿಂಗ್ ಕೌಶಲ್ಯವು ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಕುರಿತ ಚರ್ಚೆಗೆ ಗ್ರಾಸ ಒದಗಿಸಿದೆ. ಭಾರತದ ವಿಶ್ವಕಪ್ ತಂಡವನ್ನು ಶೀಘ್ರವೇ ಪ್ರಕಟಿಸಲು ಸಿದ್ದತೆ ನಡೆಸಲಾಗುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ಮಾತ್ರವಲ್ಲ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದರು. ಮುಂಬೈ ವಿರುದ್ಧ ಕಾರ್ತಿಕ್ ಕೇವಲ 23 ಎಸೆತಗಳಲ್ಲಿ ಔಟಾಗದೆ 53 ರನ್ ಗಳಿಸಿದ್ದರು. ಆದರೆ ಈ ಪಂದ್ಯವನ್ನು ಆರ್ಸಿಬಿ ಕಳೆದುಕೊಂಡಿದೆ.
ಚೆನ್ನಾಗಿ ಆಡಿದ್ದೀರಿ ಡಿಕೆ! : ಟಿ20 ವಿಶ್ವಕಪ್ ಗೆ ಆಯ್ಕೆಯಾಗಲು ಇವರನ್ನು ಪುಶ್ ಮಾಡಬೇಕಾಗಿದೆ. ಅವರು ವಿಶ್ವಕಪ್ ಗುಂಗಿನಲ್ಲೇ ಇದ್ದಾರೆ ಎಂದು ಕಾರ್ತಿಕ್ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಹೇಳುತ್ತಿರುವುದು ಸ್ಟಂಪ್ಮೈಕ್ ನಲ್ಲಿ ಕೇಳಿಬಂದಿತ್ತು.
ಪ್ರಸಕ್ತ ಐಪಿಎಲ್ ಟಿ20 ಟೂರ್ನಮೆಂಟ್ ನಲ್ಲಿ ಕಾರ್ತಿಕ್ ಈ ತನಕ 7 ಪಂದ್ಯಗಳಲ್ಲಿ ಆರು ಇನಿಂಗ್ಸ್ ಗಳನ್ನು ಆಡಿದ್ದಾರೆ. 205.45ರ ಸ್ಟ್ರೈಕ್ರೇಟ್ ಹಾಗೂ 75.33ರ ಸರಾಸರಿಯಲ್ಲಿ ಒಟ್ಟು 226 ರನ್ ಗಳಿಸಿದ್ದಾರೆ. 38ರ ಹರೆಯದ ಕಾರ್ತಿಕ್ ಈ ವರೆಗೆ 16 ಬೌಂಡರಿ ಹಾಗೂ 18 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಜೂನ್ 2ರಂದು ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನ ಆತಿಥ್ಯದಲ್ಲಿ ನಡೆಯುವ 2024ರ ಆವೃತ್ತಿಯ ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವಂತೆಯೇ ಈ ವರ್ಷದ ಐಪಿಎಲ್ ನಲ್ಲಿ ಬ್ಯಾಟಿಂಗ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಕಾರ್ತಿಕ್ ಅವರ ಹೆಸರು ಮತ್ತೊಮ್ಮೆ ಕೇಳಿಬರಲಾರಂಭಿಸಿದೆ.
ಕಾರ್ತಿಕ್ 2007ರ ಟಿ20 ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಚಾಂಪಿಯನ್ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕಾರ್ತಿಕ್ ಭಾಗವಹಿಸಿದ್ದರು. ಆದರೆ ಅವರು 4 ಪಂದ್ಯಗಳಲ್ಲಿ ಕೇವಲ 14 ರನ್ ಗಳಿಸಿದ್ದರು.
ಕಾರ್ತಿಕ್ ಗೆ ಸಾಕಷ್ಟು ಅವಕಾಶ ನೀಡಲಾಗಿದ್ದು ಪ್ರಮುಖ ಟೂರ್ನಮೆಂಟ್ಗೆ 38ರ ಹರೆಯದ ಕಾರ್ತಿಕ್ ಬದಲಿಗೆ ರಿಷಭ್ ಪಂತ್ರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡ ನ್ಯೂಯಾರ್ಕ್ನಲ್ಲಿ ಜೂನ್ 5ರಂದು ಐರ್ಲ್ಯಾಂಡ್ ವಿರುದ್ಧ ಆಡುವ ಮೂಲಕ ಟಿ20 ವಿಶ್ವಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.