ವಿಶ್ವಕಪ್ ನಲ್ಲಿ ಭಾರತದ ಅಜೇಯ ಓಟ

Update: 2023-10-30 14:11 GMT

Photo: cricketworldcup.com

ಲಕ್ನೊ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ರವಿವಾರ ಬರೋಬ್ಬರಿ 100 ರನ್‌ನಿಂದ ಹೀನಾಯವಾಗಿ ಸೋಲಿಸಿದ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನದಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಮಾತ್ರವಲ್ಲ ಕ್ರಿಕೆಟ್ ಜನಕ ಆಂಗ್ಲರನ್ನು ಸೆಮಿ ಫೈನಲ್ ರೇಸ್‌ನಿಂದ ಹೊರದಬ್ಬಿದೆ.

ಆರು ಪಂದ್ಯಗಳಲ್ಲಿ ಆರರಲ್ಲೂ ಜಯ ಸಾಧಿಸಿರುವ ಭಾರತವು ಮೂರನೇ ಬಾರಿ ಏಕದಿನ ವಿಶ್ವಕಪ್ ಜಯಿಸಲು ಪರಿಪೂರ್ಣ ಯೋಜನೆ ರೂಪಿಸಿದೆ. ಭಾರತವು ಈ ಹಿಂದೆ 1983 ಹಾಗೂ 2011ರಲ್ಲಿ ವಿಶ್ವಕಪ್‌ನ್ನು ಗೆದ್ದುಕೊಂಡಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯ(6 ವಿಕೆಟ್), ಅಫ್ಘಾನಿಸ್ತಾನ(8 ವಿಕೆಟ್), ಪಾಕಿಸ್ತಾನ(7 ವಿಕೆಟ್), ಬಾಂಗ್ಲಾದೇಶ(7 ವಿಕೆಟ್), ನ್ಯೂಝಿಲ್ಯಾಂಡ್(4 ವಿಕೆಟ್)ತಂಡಗಳನ್ನು ಈಗಾಗಲೇ ಸೋಲಿಸಿದೆ. ಲೀಗ್ ಹಂತದಲ್ಲಿ ಶ್ರೀಲಂಕಾ(ನ.2), ದಕ್ಷಿಣ ಆಫ್ರಿಕಾ(ನ.5) ಹಾಗೂ ನೆದರ್‌ಲ್ಯಾಂಡ್ಸ್(ನ.12) ತಂಡಗಳ ವಿರುದ್ದ ಆಡಲು ಬಾಕಿ ಇದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಗೆಲ್ಲಲು 230 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಬುಮ್ರಾ(3-32) ಹಾಗೂ ಮುಹಮ್ಮದ್ ಶಮಿ(4-22)ದಾಳಿಗೆ ದಿಕ್ಕಾಪಾಲಾಗಿ 129 ರನ್‌ಗೆ ಆಲೌಟಾಯಿತು.

ಭಾರತವು ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ನಲ್ಲಿ ಭಾರೀ ಅಂತರದಿಂದ(100 ರನ್)ಜಯ ಸಾಧಿಸಿತು. 2003ರಲ್ಲಿ ಡರ್ಬನ್‌ನಲ್ಲಿ ಸೌರವ್ ಗಂಗುಲಿ ನೇತೃತ್ವದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 82 ರನ್‌ನಿಂದ ಸೋಲಿಸಿದ್ದು ಈ ವರೆಗಿನ ಬೃಹತ್ ಅಂತರದ ಗೆಲುವಾಗಿತ್ತು.

ರೋಹಿತ್ ಶರ್ಮಾ ಅವರು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ ಹಾಗೂ ವಿರಾಟ್ ಕೊಹ್ಲಿ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18,000 ರನ್ ಗಳಿಸಿದ ಭಾರತದ ಐದನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು.

ರೋಹಿತ್ ಶರ್ಮಾ ಅವರು ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಶಾಕಿಬ್ ಅಲ್ ಹಸನ್ ಹಾಗೂ ಕುಮಾರ ಸಂಗಕ್ಕರ ನಂತರ ವಿಶ್ವಕಪ್‌ನಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ ಐದನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ನಾಯಕ ರೋಹಿತ್ ಶರ್ಮಾ ಈ ವರ್ಷ 21 ಇನಿಂಗ್ಸ್‌ಗಳಲ್ಲಿ 56 ಸಿಕ್ಸರ್‌ಗಳನ್ನು ಸಿಡಿಸಿ ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದರು. ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಟರ್‌ವೊಬ್ಬನ 2ನೇ ಶ್ರೇಷ್ಠ ಸಾಧನೆ ಇದಾಗಿದೆ. 2019ರಲ್ಲಿ ವೆಸ್ಟ್‌ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ 15 ಇನಿಂಗ್ಸ್‌ಗಳಲ್ಲಿ 56 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 2015ರಲ್ಲಿ 18 ಇನಿಂಗ್ಸ್‌ಗಳಲ್ಲಿ 58 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.

ರೋಹಿತ್ ಶರ್ಮಾ ಅವರು ವಿಶ್ವಕಪ್‌ನಲ್ಲಿ ಮೊದಲ ಆರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತದ ಮೊತ್ತ ಮೊದಲ ನಾಯಕನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಎಲ್ಲ ಆರು ಪಂದ್ಯಗಳನ್ನು ಪ್ರಸಕ್ತ ವಿಶ್ವಕಪ್‌ನಲ್ಲಿ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತವು 2019ರ ಜೂನ್ 5ರಿಂದ 2019ರ ಜೂನ್ 17ರ ತನಕ ಮೊದಲ ಐದು ವಿಶ್ವಕಪ್ ಪಂದ್ಯಗಳನ್ನು ಗೆದ್ದುಕೊಂಡಿತ್ತು.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News