ಭಾರತದ ಡಬ್ಲ್ಯುಟಿಸಿ ಫೈನಲ್ ಅರ್ಹತೆ ಹಾದಿ ಕಠಿಣ: ಕುಂಬ್ಳೆ ಅಸಮಾಧಾನ

Update: 2024-10-27 03:05 GMT

PC: x.com/BCCI

ಹೊಸದಿಲ್ಲಿ:  ಬ್ಯಾಟಿಂಗ್ ವೈಫಲ್ಯದಿಂದಾಗಿ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸೋತ ಭಾರತೀಯ ತಂಡದ ಬಗ್ಗೆ ಮಾಂತ್ರಿಕ ಸ್ಪಿನ್ನರ್ ಅನಿಲ್ ಕುಂಬ್ಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಬೆಂಗಳೂರು ಹಾಗೂ ಪುಣೆ ಹೀಗೆ ಎರಡೂ ಟೆಸ್ಟ್ ಗಳಲ್ಲಿ ಸೋಲು ಅನುಭವಿಸಿರುವ ಭಾರತ ಪ್ರವಾಸಿ ತಂಡಕ್ಕೆ ಸರಣಿ ಬಿಟ್ಟುಕೊಟ್ಟಿದೆ. ಇದೀಗ ವೈಟ್ ವಾಶ್ ತಪ್ಪಿಸಿಕೊಳ್ಳಲು ನವೆಂಬರ್ 1ರಿಂದ ಮುಂಬೈನಲ್ಲಿ ನಡೆಯುವ ಮೂರನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶನಿವಾರ 113 ರನ್ ಗಳ ಜಯ ಸಾಧಿಸುವ ಮೂಲಕ ಟಾಮ್ ಲ್ಯಾಥಮ್ ನೇತೃತ್ವದ ನ್ಯೂಝಿಲೆಂಡ್ ತಂಡ ಭಾರತೀಯ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಸರಣಿ ಗೆದ್ದ ಸಾಧನೆಗೆ ಪಾತ್ರವಾಗಿದೆ. ಈ ಸೋಲಿನೊಂದಿಗೆ ಭಾರತದ 18 ಸರಣಿಗಳ ಅಜೇಯ ದಾಖಲೆ ಮುರಿದಂತಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಬೇಕಾದರೆ ಭಾರತ ಪ್ರತಿ ಪಂದ್ಯವನ್ನು ಗೆಲ್ಲಬೇಕಾದ ಅಗತ್ಯತೆಯನ್ನು ಕುಂಬ್ಳೆ ಪ್ರತಿಪಾದಿಸಿದ್ದಾರೆ. ಜಿಯೊ ಸಿನಿಮಾ ಜತೆ ಮಾತನಾಡಿದ ಅವರು, "ಅದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಸೌಂದರ್ಯ. ಈ ಸರಣಿ ಭಾರತಕ್ಕೆ ಕೊನೆಗೊಂಡಿದ್ದರೂ, ಪ್ರತಿ ಪಂದ್ಯವೂ ಮಹತ್ವದ್ದು. ತಮ್ಮ ಕೈಯಾರೆ ಪರಿಸ್ಥಿತಿಯನ್ನು ಕಠಿಣಪಡಿಸಿಕೊಂಡಿದ್ದಾರೆ. ಸುಲಭವಾಗಿ ಫೈನಲ್ ತಲುಪಲು ಐದು ಪಂದ್ಯಗಳನ್ನು ಗೆಲ್ಲುವ ಅಗತ್ಯತೆಯ ಬಗ್ಗೆ ಸರಣಿ ಆರಂಭದಲ್ಲಿ ಮಾತನಾಡಿದ್ದೆವು. ಆದರೆ ಮುಂದಿನ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಇದು ಮತ್ತಷ್ಟು ಕಠಿಣ. ಏಕೆಂದರೆ ಆತ್ಮವಿಶ್ವಾಸದಿಂದ ತುಂಬಿರುವ ನ್ಯೂಝಿಲೆಂಡ್ ವಿರುದ್ಧ ಮುಂಬೈನಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳನ್ನು ಆಡಬೇಕಿದೆ" ಎಂದು ವಿಶ್ಲೇಷಿಸಿದರು.

ಭಾರತದ ಬೌಲಿಂಗ್ ಸಾಮರ್ಥ್ಯವನ್ನು ಗುಣಗಾನ ಮಾಡಿದ ಕುಂಬ್ಳೆ, ಸರಣಿಯಲ್ಲಿ 20 ವಿಕೆಟ್ ಪಡೆಯುವ ಅವರ ಸಾಮರ್ಥ್ಯ ಅವರನ್ನು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತಂದು ನಿಲ್ಲಿಸಿದೆ ಎಂದರು. ಆದರೂ ಭಾರತೀಯ ಬ್ಯಾಟ್ಸ್ ಮನ್ಗಳು ರನ್ ಕೊಡುಗೆ ನೀಡುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News