ಪ್ಯಾನ್ ಪೆಸಿಫಿಕ್ ಓಪನ್ | ಈ ವರ್ಷ ಮೂರನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಝೆಂಗ್

Update: 2024-10-27 14:23 GMT

 ಝೆಂಗ್ ಕ್ವಿನ್‌ವೆನ್ | PC : AP

ಟೋಕಿಯೊ : ಅಮೆರಿಕದ ಸೋಫಿಯಾ ಕೆನಿನ್‌ರನ್ನು ಮಣಿಸಿದ ಚೀನಾದ ಝೆಂಗ್ ಕ್ವಿನ್‌ವೆನ್ ಪ್ಯಾನ್ ಪೆಸಿಫಿಕ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಈ ವರ್ಷ ಮೂರನೇ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ರವಿವಾರ ಒಂದು ಗಂಟೆ ಹಾಗೂ 52 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಝೆಂಗ್ ಅವರು ಅಮೆರಿಕದ ಸೋಫಿಯಾರನ್ನು 7-6(5), 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ವರ್ಷ ಪಾಲೆರ್ಮೊ ಹಾಗೂ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದಿರುವ 22ರ ಹರೆಯದ ಝೆಂಗ್ ಇದೀಗ ಮೂರನೇ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಝೆಂಗ್ ಐದು ಬ್ರೇಕ್ ಪಾಯಿಂಟ್ ಅನ್ನು ಪಾಯಿಂಟ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ, ಟೈ-ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದ ಝೆಂಗ್ ಮೊದಲ ಸೆಟ್‌ನ್ನು 7-6(5) ಅಂತರದಿಂದ ಗೆದ್ದುಕೊಂಡರು.

ಎರಡನೇ ಸೆಟ್‌ನ್ನು ಸಂಪೂರ್ಣ ವಿಭಿನ್ನವಾಗಿ ಆಡಲಾಗಿದ್ದು, ಝೆಂಗ್ ಆರಂಭದಲ್ಲೇ ಮೇಲುಗೈ ಸಾಧಿಸಿದರು. ವಿಶ್ವದ ನಂ.7ನೇ ಆಟಗಾರ್ತಿ ಝೆಂಗ್ ಅಂತಿಮವಾಗಿ 2ನೇ ಸೆಟ್ಟನ್ನು 6-3 ಅಂತರದಿಂದ ಗೆದ್ದುಕೊಂಡಿದ್ದಾರೆ.

ಈ ಗೆಲುವಿನ ಮೂಲಕ ಝೆಂಗ್ ಅವರು ಪಾನ್ ಪೆಸಿಫಿಕ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿದರು. 22ರ ಹರೆಯದ ಝೆಂಗ್ ಈ ಹಿಂದೆ 2022ರಲ್ಲಿ ಫೈನಲ್ ಪಂದ್ಯದಲ್ಲಿ ಲುಡ್ಮಿಲಾ ಸಮ್ಸೋನೋವಾ ವಿರುದ್ಧ ಸೋತಿದ್ದರು.

ಕಳೆದ ವರ್ಷ ಝೆಂಗ್‌ಝೌ ಓಪನ್‌ನ ನಂತರ ಝೆಂಗ್ ಗೆದ್ದಿರುವ ಮೊದಲ ಹಾರ್ಡ್-ಕೋರ್ಟ್ ಪ್ರಶಸ್ತಿ ಇದಾಗಿದೆ. ಪಾನ್ ಪೆಸಿಫಿಕ್ ಪ್ರಶಸ್ತಿಯು ಮುಂದಿನ ತಿಂಗಳ ವರ್ಷಾಂತ್ಯದಲ್ಲಿ ಸೌದಿ ಅರೇಬಿಯದಲ್ಲಿ ನಡೆಯುವ ಡಬ್ಲ್ಯುಟಿಎ ಫೈನಲ್ಸ್‌ಗೆ ಹೊಸ ಹುರುಪು ನೀಡಿದೆ.

ನಾನು ನಿಮಗೆ ಧನ್ಯವಾದ ಸಲ್ಲಿಸಲು ಬಯಸುವೆ. ನೀವು ಉತ್ತಮವಾಗಿ ಆಡಿದ್ದೀರಿ. ನೀವು ಗಾಯಗೊಂಡಿದ್ದರೂ ಟೇಪ್ ಧರಿಸಿ ಆಡಿದ್ದನ್ನು ನೋಡಿದ್ದೇನೆ. ನೀವು ಟೆನಿಸ್ ಕೋರ್ಟ್‌ನಲ್ಲಿ ಕಠಿಣ ಹೋರಾಟ ನೀಡಿದ್ದೀರಿ ಎಂದು ಕೆನಿನ್ ಉದ್ದೇಶಿಸಿ ಝೆಂಗ್ ಹೇಳಿದ್ದಾರೆ.

ಫೈನಲ್‌ನಲ್ಲಿ ಸೋತ ಹೊರತಾಗಿಯೂ 2020ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೆನಿನ್ ಅವರು ಈ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನದಿಂದ ಸಕಾರಾತ್ಮಕ ಅಂಶ ಪಡೆದಿದ್ದಾರೆ. ಫೈನಲ್ ಹಾದಿಯಲ್ಲಿ ಕೇವಲ ಒಂದು ಸೆಟ್‌ನ್ನು ಸೋತಿರುವ ಕೆನಿನ್ ಅವರು ವಿಶ್ವದ ನಂ.9ನೇ ಆಟಗಾರ್ತಿ ಡರಿಯಾ ಕಸಟ್ಕಿನಾರನ್ನು ಸೋಲಿಸಿದ್ದರು.

25ರ ಹರೆಯದ ಕೆನಿನ್ 2020ರ ಫ್ರೆಂಚ್ ಓಪನ್‌ನಲ್ಲಿ ರನ್ನರ್ಸ್ ಅಪ್ ಆಗಿದ್ದರು. ಆ ಋತುವಿನಲ್ಲಿ ಜೀವನಶ್ರೇಷ್ಠ 4ನೇ ಸ್ಥಾನ ತಲುಪಿದ್ದರು. ಗಾಯದ ಸಮಸ್ಯೆಗಳು, ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ರ್ಯಾಂಕಿಂಗ್‌ನಲ್ಲಿ ಹಿನ್ನಡೆ ಕಂಡಿದ್ದರು.

ನನಗೆ ವೈಲ್ಡ್ ಕಾರ್ಡ್ ನೀಡಿದ್ದ ಪಂದ್ಯಾವಳಿಯ ನಿರ್ದೇಶಕರಿಗೆ ಧನ್ಯವಾದ ತಿಳಿಸಲು ಬಯಸುವೆ. ದುರದೃಷ್ಟವಶಾತ್ ಇಂದು ನಾನು ಪ್ರಶಸ್ತಿಯನ್ನು ಜಯಿಸಿಲ್ಲ. ಆದರೆ, ಈ ವಾರ ನಾನು ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ ಎಂದು ಕೆನಿನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News