ಪಾಕಿಸ್ತಾನದ ಏಕದಿನ, ಟಿ-20 ನಾಯಕರಾಗಿ ಮುಹಮ್ಮದ್ ರಿಝ್ವಾನ್ ನೇಮಕ

Update: 2024-10-27 14:46 GMT

PC : AP

ಕರಾಚಿ : ಪಾಕಿಸ್ತಾನದ ಏಕದಿನ ಹಾಗೂ ಟಿ20 ತಂಡಗಳ ನಾಯಕರನ್ನಾಗಿ ಮುಹಮ್ಮದ್ ರಿಝ್ವಾನ್‌ ರನ್ನು ಅಧಿಕೃತವಾಗಿ ನೇಮಿಸಿರುವ ಪಾಕಿಸ್ತಾನದ ಕ್ರಿಕೆಟ್ ಮಂಡಳಿ(ಪಿಸಿಬಿ)ರಾಷ್ಟ್ರೀಯ ಕ್ರಿಕೆಟ್ ನಾಯಕತ್ವದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸೂಚನೆ ನೀಡಿದೆ.

32ರ ಹರೆಯದ ವಿಕೆಟ್‌ ಕೀಪರ್-ಬ್ಯಾಟರ್ ರಿಝ್ವಾನ್ ಅವರು ಬಾಬರ್ ಆಝಮ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಬಾಬರ್ ತನ್ನ ನಾಯಕತ್ವ ಸ್ಥಾನವನ್ನು ತ್ಯಜಿಸಿದ್ದರು.

ಪಿಸಿಬಿ, ಸೀಮಿತ ಓವರ್ ಕ್ರಿಕೆಟ್ ತಂಡಕ್ಕೆ ಸಲ್ಮಾನ್ ಅಲಿ ಅವರನ್ನು ಉಪ ನಾಯಕರನ್ನಾಗಿ ನೇಮಿಸಿದೆ. 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಹಾಗೂ 2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಗ್ರೂಪ್ ಹಂತದಿಂದ ನಿರ್ಗಮಿಸಿದ ನಂತರ ರಿಝ್ವಾನ್ ನೇಮಕವಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬಾಬರ್ ತನ್ನ ರಾಜೀನಾಮೆಯನ್ನು ಖಚಿತಪಡಿಸಿದ್ದರು.

ಪಾಕಿಸ್ತಾನದ ಮುಂಬರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸದಲ್ಲಿ ರಿಝ್ವಾನ್ ತನ್ನ ನಾಯಕತ್ವ ಪಯಣ ಆರಂಭಿಸಲಿದ್ದಾರೆ. ಆಸೀಸ್ ಪ್ರವಾಸದಲ್ಲಿ ಪಾಕಿಸ್ತಾನ ತಂಡವು 3 ಏಕದಿನ ಪಂದ್ಯಗಳು(ನವೆಂಬರ್ 4,8,10)ಹಾಗೂ ಮೂರು ಟಿ-20 ಪಂದ್ಯಗಳನ್ನು(ನ.14, 16 ಹಾಗೂ 18)ಮೂರು ನಗರಗಳಾದ ಮೆಲ್ಬರ್ನ್, ಸಿಡ್ನಿ ಹಾಗೂ ಹೊಬರ್ಟ್‌ನಲ್ಲಿ ಆಡಲಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News