ಐಪಿಎಲ್ ನ ಅತಿವೇಗದ ಎಸೆತ ದಾಖಲಿಸಿದ ಮಯಾಂಕ್ ಯಾದವ್ ಬಗ್ಗೆ ಸ್ವಾರಸ್ಯಕರ ಮಾಹಿತಿ...

Update: 2024-03-31 03:01 GMT

Photo: twitter.com/mufaddal_vohra

ಲಕ್ನೋ: ಪ್ರಸಕ್ತ ಐಪಿಎಲ್ ಸೀಸನ್ ನ ಅತಿವೇಗದ ಎಸೆತವನ್ನು ಶನಿವಾರ ನಡೆದ ಪಂದ್ಯದಲ್ಲಿ ಯುವ ಬೌಲರ್ ಮಯಾಂಕ್ ಯಾದವ್ ದಾಖಲಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ ಚೊಚ್ಚಲ ಪಂದ್ಯ ಆಡಿದ ಈ ಯುವಪ್ರತಿಭೆ, ಪಂಜಾಬ್ ಕಿಂಗ್ಸ್ ಇನಿಂಗ್ಸ್ ನ 12ನೇ ಓವರ್ನಲ್ಲಿ ಉತ್ತಮ ಲಯದೊಂದಿಗೆ 155.8 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ, ಅನುಭವಿ ಬ್ಯಾಟರ್ ಶಿಖರ್ ಧವನ್ ಅವರನ್ನು ಕಕ್ಕಾಬಿಕ್ಕಿಗೊಳಿಸಿದರು.

21 ವರ್ಷ ವಯಸ್ಸಿನ ಯಾದವ್ ಅವರನ್ನು 2022ರಲ್ಲಿ ಎಲ್ಎಸ್ ಜಿ ತಂಡ 20 ಲಕ್ಷ ರೂಪಾಯಿಗೆ ಖರೀದಿಸಿತ್ತು. ಆದರೆ ಗಾಯದ ಕಾರಣದಿಂದ ಅರ್ಪಿತ್ ಗುಲೇರಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಟಿ-20 ಕ್ರಿಕೆಟ್ ನ 10 ಪಂದ್ಯಗಳಲ್ಲಿ 12 ವಿಕೆಟ್ ಪಡೆದ ಇವರು, ವೃತ್ತಿ ಜೀವನದಲ್ಲಿ 17 ಪಂದ್ಯಗಳಲ್ಲಿ 34 ವಿಕೆಟ್ ಕಬಳಿಸಿದ್ದಾರೆ.

ದೇಶೀಯ ಕ್ರಿಕೆಟ್ ನಲ್ಲಿ ದೆಹಲಿಯನ್ನು ಪ್ರತಿನಿಧಿಸುವ ಯಾದವ್, ಸೈಯ್ಯದ್ ಮುಸ್ತಾಕ್ ಅಲಿ ಟ್ರೋಫಿಯ ಸೆಮಿಫೈನಲ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದಿದ್ದರು.

ಅಂತಿಮವಾಗಿ ಶನಿವಾರದ ಪಂದ್ಯದಲ್ಲಿ 27 ರನ್ ಗಳಿಗೆ 3 ವಿಕೆಟ್ ಪಡೆದ ಯುವ ಬೌಲರ್, ಜಾನಿ ಬ್ರೆಸ್ಟೊ, ಪ್ರಭಸಿಮ್ರನ್ ಸಿಂಗ್ ಮತ್ತು ಜಿತೇಶ್ ಶರ್ಮಾ ಅವರನ್ನು ಪೆವಿಲಿಯನ್ಗೆ ಅಟ್ಟಿದರು.

"ಚೊಚ್ಚಲ ಪಂದ್ಯ ಇಷ್ಟೊಂದು ಉತ್ತಮವಾಗುತ್ತದೆ ಎಂದು ಭಾವಿಸಿರಲಿಲ್ಲ. ಪಂದ್ಯ ಆರಂಭಕ್ಕೆ ಮುನ್ನ ಸ್ವಲ್ಪ ಹಿಂಜರಿಕೆ ಇತ್ತು. ನನ್ನ ವೇಗ ಹಾಗೂ ಸ್ಟಂಪ್ ಮೇಲಿನ ಗುರಿಯನ್ನು ಕೇಂದ್ರೀಕರಿಸಿ ಬೌಲಿಂಗ್ ಮಾಡಿದೆ. ಆರಂಭದಲ್ಲಿ ನಿಧಾನ ಬೌಲಿಂಗ್ ಪ್ರಯತ್ನಿಸಲು ಯೋಚಿಸಿದೆ. ಆದರೆ ಬಳಿಕ ವೇಗದ ಬೌಲಿಂಗ್ ಗೆ ಗಮನ ಹರಿಸಿದೆ. ಮೊದಲ ವಿಕೆಟ್ ವಿಶೇಷ. ಯುವ ವಯಸ್ಸಿನಲ್ಲಿ ಇದು ಉತ್ತಮ ಆರಂಭ. ಕೆಲವೊಂದು ಗುರಿಗಳಿದ್ದು, ಇದನ್ನು ಸಾಧಿಸುವಲ್ಲಿ ಗಾಯಗಳು ಅಡ್ಡವಾದರೆ ಏನೂ ಮಾಡುವಂತಿಲ್ಲ" ಎಂದು ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು. ಈ ಪಂದ್ಯದಲ್ಲಿ ಎಲ್ಎಸ್ ಜಿ 21 ರನ್ ಗಳ ಜಯ ಸಾಧಿಸಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News