ಅಂತರ್ ರಾಷ್ಟ್ರೀಯ ಕ್ರಿಕೆಟ್ ಗರಿಷ್ಠ ರನ್: ಧೋನಿ ದಾಖಲೆ ಹಿಂದಿಕಿದ ರೋಹಿತ್

Update: 2023-07-21 18:12 GMT

 Rohit Sharma | PTI

ಟ್ರಿನಿಡಾಡ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಐದನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರ ಹೊಮ್ಮುವ ಮೂಲಕ ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದರು.

ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಗುರುವಾರ ಆರಂಭವಾದ ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ರೋಹಿತ್ ಈ ಮೈಲಿಗಲ್ಲು ತಲುಪಿದರು. ಡೊಮಿನಿಕಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ಪ್ರಸಕ್ತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ರೋಹಿತ್ ಪ್ರವಾಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದಾರೆ.

ರೋಹಿತ್ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 143 ಎಸೆತಗಳಲ್ಲಿ 80 ರನ್ ಗಳಿಸಿದ್ದಾರೆ. ಈ ಇನಿಂಗ್ಸ್ ನ ಮೂಲಕ ರೋಹಿತ್ 443 ಪಂದ್ಯಗಳಲ್ಲಿ ಒಟ್ಟು 17,298 ಅಂತರ್ರಾಷ್ಟ್ರೀಯ ರನ್ ಗಳಿಸಿದ್ದಾರೆ. ರೋಹಿತ್ 436 ಇನಿಂಗ್ಸ್ ಗಳಲ್ಲಿ 44 ಶತಕ ಹಾಗೂ 92 ಅರ್ಧಶತಕಗಳನ್ನು ಗಳಿಸಿದ್ದು ಗರಿಷ್ಠ ವೈಯಕ್ತಿಕ ಸ್ಕೋರ್ 264 ರನ್ ಗಳಿಸಿದ್ದಾರೆ. ಇದನ್ನು ಅವರು ಏಕದಿನ ಕ್ರಿಕೆಟ್ ನಲ್ಲಿ ಸಾಧಿಸಿದ್ದರು. ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಭಾರತದ ಬ್ಯಾಟಿಂಗ್ ಲೆಜೆಂಡ್ ಗಳೊಂದಿಗೆ ಸ್ಥಾನ ಪಡೆದಿದ್ದಾರೆ. ಅಗ್ರ 4 ಸ್ಥಾನಗಳಲ್ಲಿ ಸಚಿನ್ ತೆಂಡುಲ್ಕರ್(664 ಪಂದ್ಯಗಳು, 34,357 ರನ್), ವಿರಾಟ್ ಕೊಹ್ಲಿ(500 ಪಂದ್ಯಗಳು, 25,548 ರನ್), ರಾಹುಲ್ ದ್ರಾವಿಡ್(509 ಪಂದ್ಯಗಳು, 24,208 ರನ್) ಹಾಗೂ ಸೌರವ್ ಗಂಗುಲಿ(424 ಪಂದ್ಯಗಳು, 18,575 ರನ್) ಅವರಿದ್ದಾರೆ. ಇದೀಗ ರೋಹಿತ್ ಅವರು ಎಂ.ಎಸ್. ಧೋನಿ (538 ಪಂದ್ಯಗಳಲ್ಲಿ 17,266 ರನ್) ದಾಖಲೆಯನ್ನು ಮುರಿದು ಮುನ್ನುಗ್ಗಿದ್ದಾರೆ.

ರೋಹಿತ್ 52 ಟೆಸ್ಟ್ ಪಂದ್ಯಗಳಲ್ಲಿ 87 ಇನಿಂಗ್ಸ್ ಗಳಲ್ಲಿ 46.41ರ ಸರಾಸರಿಯಲ್ಲಿ 10 ಶತಕಗಳು ಹಾಗೂ 15 ಅರ್ಧಶತಕಗಳ ಸಹಿತ 3,620 ರನ್ ಗಳಿಸಿದ್ದು, ವೈಯಕ್ತಿಕ ಗರಿಷ್ಠ 212 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ರೋಹಿತ್ 243 ಪಂದ್ಯಗಳನ್ನು ಆಡಿದ್ದು, 48.64ರ ಸರಾಸರಿಯಲ್ಲಿ 9,825 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಹಾಗೂ 48 ಅರ್ಧಶತಕಗಳಿವೆ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 264 ರನ್ ಗಳಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್ನಲ್ಲಿ ರೋಹಿತ್ 148 ಪಂದ್ಯಗಳಲ್ಲಿ 30.82ರ ಸರಾಸರಿಯಲ್ಲಿ 4 ಶತಕ ಹಾಗೂ 29 ಅರ್ಧಶತಕಗಳ ಸಹಿತ ಒಟ್ಟು 3,853 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 118 ರನ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News