ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟರ್ಬ್ಸ್ ಅರ್ಧಶತಕ | ಲಕ್ನೊ ವಿರುದ್ಧ ಡೆಲ್ಲಿಗೆ ಜಯ

Update: 2024-05-14 18:20 GMT

PC :X/@IPL

ಹೊಸದಿಲ್ಲಿ : ಅಭಿಷೇಕ್ ಪೊರೆಲ್(58 ರನ್, 33 ಎಸೆತ) ಹಾಗೂ ಟ್ರಿಸ್ಟಾನ್ ಸ್ಟಬ್ಸ್(ಔಟಾಗದೆ 57,25 ಎಸೆತ)ಅರ್ಧಶತಕಗಳ ಕೊಡುಗೆ, ಇಶಾಂತ್ ಶರ್ಮಾ(3-34) ನಿಖರ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು 19 ರನ್ ಅಂತರದಿಂದ ಮಣಿಸಿದೆ. ಆ ಮೂಲಕ ಆರ್ ಸಿ ಬಿ ಯ ಪ್ಲೇ ಆಫ್ ಕನಸು ಜೀವಂತವಾಗಿದೆ.

ಈ ವರ್ಷದ ಐಪಿಎಲ್‌ನಲ್ಲಿ ಇಂದು ಕೊನೆಯ ಪಂದ್ಯ ಆಡಿದ ಡೆಲ್ಲಿ ಒಟ್ಟು 14 ಅಂಕ ಗಳಿಸಿ 5ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಮತ್ತೊಂದೆಡೆ ಲಕ್ನೊ ಇನ್ನೊಂದೇ ಪಂದ್ಯ ಆಡಲು ಬಾಕಿ ಇದ್ದು ಈ ಸೋಲಿನೊಂದಿಗೆ ಪ್ಲೇ ಆಫ್ ಕನಸು ಬಹುತೇಕ ಕಮರಿಹೋಗಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 64ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಲಕ್ನೊ ತಂಡದ ನಾಯಕ ಕೆ.ಎಲ್.ರಾಹುಲ್ ಆತಿಥೇಯ ಡೆಲ್ಲಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 208 ರನ್ ಕಲೆ ಹಾಕುವಲ್ಲಿ ಶಕ್ತವಾಯಿತು.

ಗೆಲ್ಲಲು 209 ರನ್ ಗುರಿ ಬೆನ್ನಟ್ಟಿದ ಲಕ್ನೊ ತಂಡ ನಿಕೊಲಸ್ ಪೂರನ್(61 ರನ್,27 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಅರ್ಷದ್ ಖಾನ್(ಔಟಾಗದೆ 58 ರನ್, 33 ಎಸೆತ, 3 ಬೌಂಡರಿ, 5 ಸಿಕ್ಸರ್)ಕೆಚ್ಚೆದೆಯ ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿ ಪರ ಲಂಬೂ ಬೇಗಿ ಇಶಾಂತ್ ಯಶಸ್ವಿ ಬೌಲರ್ ಎನಿಸಿಕೊಂಡರು. ಟ್ರಿಸ್ಟಾನ್ ಸ್ಟಬ್ಸ್(1-4), ಅಕ್ಷರ್ ಪಟೇಲ್(1-20), ಖಲೀಲ್ ಅಹ್ಮದ್(1-22), ಮುಕೇಶ್ ಕುಮಾರ್(1-33) ಹಾಗೂ ಕುಲದೀಪ್ ಯಾದವ್ (1-33) ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಅಪಾಯಕಾರಿ ಆಟಗಾರ ಜೇಕ್ ಫ್ರೆಸರ್(0)ವಿಕೆಟನ್ನು ಕಳೆದುಕೊಂಡ ಡೆಲ್ಲಿ ಆರಂಭ ಕಳಪೆಯಾಗಿತ್ತು. ಇದರಿಂದ ಬೇಗನೆ ಚೇತರಿಸಿಕೊಂಡ ಡೆಲ್ಲಿ ಪರ ಶಾಯ್ ಹೋಪ್(38 ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ಆರಂಭಿಕ ಬ್ಯಾಟರ್ ಅಭಿಷೇಕ್(58 ರನ್, 33 ಎಸೆತ, 5 ಬೌಂಡರಿ, 4 ಸಿಕ್ಸರ್) 2ನೇ ವಿಕೆಟ್‌ಗೆ 49 ಎಸೆತಗಳಲ್ಲಿ 92 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಅಭಿಷೇಕ್ 21 ಎಸೆತಗಳಲ್ಲಿ ಐಪಿಎಲ್‌ನಲ್ಲಿ ತನ್ನ 2ನೇ ಅರ್ಧಶತಕವನ್ನು ಗಳಿಸಿದರು. ಡೆಲ್ಲಿ ಪವರ್ ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತು.

ಆದರೆ ಹೋಪ್ ಹಾಗೂ ಅಭಿಷೇಕ್ ಬೆನ್ನಿಬೆನ್ನಿಗೆ ಔಟಾದರು. ನಾಯಕ ರಿಷಭ್ ಪಂತ್(33 ರನ್, 23 ಎಸೆತ, 5 ಬೌಂಡರಿ)ಹಾಗೂ ಟ್ರಿಸ್ಟಾನ್ ಸ್ಟರ್ಬ್ಸ್ 4ನೇ ವಿಕೆಟ್‌ಗೆ 47 ರನ್ ಸೇರಿಸಿ ಮಧ್ಯಮ ಓವರ್‌ನಲ್ಲಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಪಂತ್ ಅವರು ನವೀನ್ ಉಲ್ ಹಕ್‌ಗೆ ವಿಕೆಟ್ ಒಪ್ಪಿಸಿದರು. ಸ್ಟಬ್ಸ್ (ಔಟಾಗದೆ 57, 25 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್(ಔಟಾಗದೆ 14) 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 22 ಎಸೆತಗಳಲ್ಲಿ 50 ರನ್ ಸೇರಿಸಿ ಡೆಲ್ಲಿ ತಂಡದ ಮೊತ್ತವನ್ನು 208ಕ್ಕೆ ತಲುಪಿಸಿದರು.

ಲಕ್ನೊದ ಪರ ನವೀನ್ ಉಲ್ ಹಕ್(2-51)ಎರಡು ವಿಕೆಟ್ ಪಡೆದರೂ ದುಬಾರಿ ಬೌಲರ್ ಎನಿಸಿಕೊಂಡರು. ರವಿ ಬಿಷ್ಣೋಯ್(1-26) ಹಾಗೂ ಅರ್ಷದ್ ಖಾನ್ (1-45) ತಲಾ ಒಂದು ವಿಕೆಟ್ ಪಡೆದರು. ಎಡಗೈ ವೇಗಿ ಮೊಹ್ಸಿನ್ ಖಾನ್ ಉತ್ತಮ ಬೌಲಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 208/4

(ಅಭಿಷೇಕ್ ಪೊರೆಲ್ 58, ಟ್ರಿಸ್ಟಾನ್ ಸ್ಟಬ್ಸ್ ಔಟಾಗದೆ 57, ಶಾಯ್ ಹೋಪ್ 38, ರಿಷಭ್ ಪಂತ್ 33, ನವೀನ್ ಉಲ್ ಹಕ್ 2-51)

ಲಕ್ನೊ ಸೂಪರ್ ಜಯಂಟ್ಸ್: 20 ಓವರ್‌ಗಳಲ್ಲಿ 189/9

(ನಿಕೊಲಸ್ ಪೂರನ್ 61, ಅರ್ಷದ್ ಖಾನ್ ಔಟಾಗದೆ 58, ಇಶಾಂತ್ ಶರ್ಮಾ 3-34)

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News