IPL | ನಾಳೆ 2ನೇ ಕ್ವಾಲಿಫೈಯರ್ ಪಂದ್ಯ ; ಫೈನಲ್ ತಲುಪಲು ರಾಜಸ್ಥಾನ ರಾಯಲ್ಸ್-ಸನ್‌ರೈಸರ್ಸ್ ಹೈದರಾಬಾದ್ ಹಣಾಹಣಿ
ಚೆನ್ನೈ: ಈಗ ನಡೆಯುತ್ತಿರುವ ಐಪಿಎಲ್ ಟಿ20 ಟೂರ್ನಿಯ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಲು ರಾಜಸ್ಥಾನ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಲಿವೆ.
ಉಭಯ ತಂಡಗಳು ಟೂರ್ನಿಯ ದ್ವಿತೀಯಾರ್ಧದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿದ್ದವು. ಆದರೆ ಇದೀಗ ಪ್ರಶಸ್ತಿ ಫೇವರಿಟ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮೇ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಎದುರಾಳಿಯಾಗುವ ವಿಶ್ವಾಸದಲ್ಲಿವೆ. ಸನ್ರೈಸರ್ಸ್ ಫೈನಲ್ ತಲುಪುವ ತನ್ನ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲನುಭವಿಸಿದೆ.
ತನ್ನ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದ ಪ್ಯಾಟ್ ಕಮಿನ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಗೆ ತಲುಪಲು ನೇತೃತ್ವವಹಿಸಿದರು. 14 ಪಂದ್ಯಗಳಲ್ಲಿ 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಸನ್ರೈಸರ್ಸ್ 2ನೇ ಸ್ಥಾನ ಪಡೆದಿತ್ತು. ಟೂರ್ನಮೆಂಟ್ನುದ್ದಕ್ಕೂ ಆಲ್ರೌಂಡ್ ಪ್ರದರ್ಶನ ನೀಡಿದ್ದ ಸನ್ರೈಸರ್ಸ್ ತಂಡ ಕೆಕೆಆರ್ ವಿರುದ್ಧ ಕ್ವಾಲಿಫೈಯರ್-1ರಲ್ಲಿ 8 ವಿಕೆಟ್ ಗಳ ಅಂತರದಿಂದ ಸೋಲನುಭವಿಸಿ ತೀವ್ರ ಹಿನ್ನಡೆ ಕಂಡಿತ್ತು. ಎರಡನೇ ಬಾರಿ ಐಪಿಎಲ್ ಪ್ರಶಸ್ತಿ ಎತ್ತುವ ವಿಶ್ವಾಸದಲ್ಲಿರುವ ಸನ್ರೈಸರ್ಸ್ ಫೈನಲ್ ತಲುಪಲು ಮತ್ತೊಂದು ಅವಕಾಶ ಪಡೆದಿದೆ.
ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಕಳೆದ ಎರಡು ಪಂದ್ಯಗಳಲ್ಲೂ ಶೂನ್ಯ ಸಂಪಾದಿಸಿದ್ದರು. ಶ್ರೀಲಂಕಾದ ಸ್ಪಿನ್ನರ್ ವಿಜಯಕಾಂತ್ ವಿಯಾಸ್ಕಾಂತ್ 3 ಇನಿಂಗ್ಸ್ ನಲ್ಲಿ ಮಿಂಚಲು ವಿಫಲರಾಗಿದ್ದಾರೆ. ಆದರೆ ಸನ್ರೈಸರ್ಸ್ ತಂಡ ಕ್ವಾಲಿಫೈಯರ್-2ರಲ್ಲಿ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
ಮತ್ತೊಂದೆಡೆ ಸತತ 4 ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಹಾದಿಗೆ ಮರಳಿದೆ. ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ತಂಡ ಆರ್ ಸಿ ಬಿ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ 173 ರನ್ ಗುರಿಯನ್ನು ಒಂದು ಓವರ್ ಬಾಕಿ ಇರುವಾಗಲೇ 6 ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿತ್ತು. ಈ ಮೂಲಕ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿದೆ. ಸತತ ಆರು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಆರ್ ಸಿ ಬಿಗೆ ಸೋಲಿನ ಬರೆ ಎಳೆದಿದೆ.
ಅವೇಶ್ ಖಾನ್ 3 ವಿಕೆಟ್ ಹಾಗೂ ಆರ್.ಅಶ್ವಿನ್ 2 ವಿಕೆಟ್ ಗಳನ್ನು ಪಡೆದು ರಾಯಲ್ಸ್ ಗೆಲುವಿಗೆ ವೇದಿಕೆ ಒದಗಿಸಿದರು.
ಹೆಡ್-ಟು-ಹೆಡ್
ಸನ್ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ ಕಡಿಮೆ ಅಂತರದಿಂದ ಮುನ್ನಡೆಯಲ್ಲಿದೆ. ಸನ್ರೈಸರ್ಸ್ ತಂಡ ರಾಯಲ್ಸ್ ವಿರುದ್ಧ ಆಡಿರುವ 19 ಐಪಿಎಲ್ ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿದೆ. ಶುಕ್ರವಾರ ನಡೆಯಲಿರುವ ಕ್ವಾಲಿಫೈಯರ್-2ರಲ್ಲಿ ಮುನ್ನಡೆಯನ್ನು ವಿಸ್ತರಿಸಿಕೊಳ್ಳಬಲ್ಲ ನೆಚ್ಚಿನ ತಂಡವಾಗಿದೆ.
ಈ ಋತುವಿನಲ್ಲಿ ಸನ್ರೈಸರ್ಸ್ ವಿರುದ್ಧ ಲೀ ಗ್ ಹಂತದ ಪಂದ್ಯದಲ್ಲಿ 202 ರನ್ ಗುರಿ ಚೇಸ್ ಮಾಡುವಾಗ ರಾಜಸ್ಥಾನ 1 ರನ್ನಿಂದ ಆಘಾತಕಾರಿ ಸೋಲನುಭವಿಸಿತ್ತು. ರೋಚಕ ಪಂದ್ಯದಲ್ಲಿ ಭುವನೇಶ್ವರ ಕುಮಾರ್ ಅವರು ಕೊನೆಯ ಎಸೆತದಲ್ಲಿ ರೋವ್ಮನ್ ಪೊವೆಲ್ರನ್ನು ಪೆವಿಲಿಯನ್ ಗೆ ಕಳುಹಿಸಿದ್ದರು. 41 ರನ್ಗೆ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಐಪಿಎಲ್ ಪ್ಲೇ ಆಫ್ನಲ್ಲಿ ಸನ್ರೈಸರ್ಸ್ ತಂಡ 12 ಪಂದ್ಯಗಳನ್ನು ಆಡಿದ್ದು 5ರಲ್ಲಿ ಜಯ, 7ರಲ್ಲಿ ಸೋತಿದೆ. ರಾಜಸ್ಥಾನ ತಂಡ ಐಪಿಎಲ್ ಪ್ಲೇ ಆಫ್ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಜಯ ಹಾಗೂ 5ರಲ್ಲಿ ಸೋಲುಂಡಿದೆ.
ಪ್ರಸಕ್ತ ಐಪಿಎಲ್ ನಲ್ಲಿ ಸನ್ರೈಸರ್ಸ್ ಬ್ಯಾಟರ್ಗಳು ಮೂರು ಬಾರಿ ಗರಿಷ್ಠ ರನ್ ದಾಖಲಿಸಿ ಗಮನ ಸೆಳೆದಿದ್ದರು. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ಕ್ಕೆ 263 ರನ್ ಗಳಿಸಿದ್ದು ಇದು ತಂಡವೊಂದರ ಗರಿಷ್ಠ ಮೊತ್ತವಾಗಿತ್ತು. ಈ ದಾಖಲೆಯನ್ನು ಸನ್ರೈಸರ್ಸ್ ಮುರಿದಿದೆ.
ಐಪಿಎಲ್ ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿರುವ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಈ ಋತುವಿನಲ್ಲಿ ಪವರ್ ಪ್ಲೇ ವೇಳೆ ಸನ್ರೈಸರ್ಸ್ ತಂಡ 100 ರನ್ ಗಳಿಸಲು ನೆರವಾಗಿದ್ದರು. ಸನ್ರೈಸರ್ಸ್ ತಂಡ ಎರಡು ಬಾರಿ ಈ ಸಾಧನೆ ಮಾಡಲು ಕಾರಣರಾಗಿದ್ದರು.
ರಾಜಸ್ಥಾನದ ಬ್ಯಾಟಿಂಗ್ ಸರದಿ ಸನ್ರೈಸರ್ಸ್ ನಷ್ಟು ಬಲಿಷ್ಠವಾಗಿಲ್ಲ. ಆದರೆ ಬೌಲಿಂಗ್ ವಿಭಾಗ ಶಕ್ತಿಶಾಲಿಯಾಗಿದೆ. ಎಡಗೈ ಸ್ವಿಂಗರ್ ಆರಂಭದಲ್ಲಿ ಕಾಡಿದರೆ, ಇಬ್ಬರು ವಿಶ್ವದರ್ಜೆಯ ಸ್ಪಿನ್ನರ್ಗಳು ಮಧ್ಯಮ ಓವರ್ಗಳಲ್ಲಿ ಕಾಡಲಿದ್ದಾರೆ.
ಉಭಯ ತಂಡಗಳು ಚೆನ್ನೈನಲ್ಲಿ ಈ ವರ್ಷ ಆಡಿದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದವು. ಸಿಎಸ್ಕೆ ವಿರುದ್ಧ 213 ರನ್ ಚೇಸ್ ವೇಳೆ ಸನ್ರೈಸರ್ಸ್ ಕೇವಲ 134 ರನ್ ಗೆ ಆಲೌಟಾಗಿತ್ತು. 2 ವಾರಗಳ ಹಿಂದೆ ರಾಜಸ್ಥಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ಗಳ ನಷ್ಟಕ್ಕೆ 141 ರನ್ ಗಳಿಸಿ 5 ವಿಕೆಟ್ನಿಂದ ಸೋತಿತ್ತು.
ಅಂಕಿ-ಅಂಶ
► ಅಶ್ವಿನ್ ಅವರು ಹೆಡ್ರನ್ನು ಈ ತನಕ ಔಟ್ ಮಾಡಿಲ್ಲ. ಆದರೆ 17 ಎಸೆತಗಳಲ್ಲಿ ಕೇವಲ 10 ರನ್ ನೀಡಿದ್ದರು. ಮತ್ತೊಂದೆಡೆ ಅಭಿಷೇಕ್ ಶರ್ಮಾ ಅವರು ಅಶ್ವಿನ್ ಎದುರು 18 ಎಸೆತಗಳಲ್ಲಿ 28 ರನ್ ಗಳಿಸಿದ್ದರು. ಒಂದು ಬಾರಿ ವಿಕೆಟ್ ಒಪ್ಪಿಸಿದ್ದರು.
► ಜೈಸ್ವಾಲ್ ಅವರು ಭುವನೇಶ್ವರ ಕುಮಾರ್ ವಿರುದ್ಧ 33 ಎಸೆತಗಳಲ್ಲಿ 54 ರನ್ ಗಳಿಸಿದ್ದರು. ಕಮಿನ್ಸ್ ವಿರುದ್ಧ 12 ಎಸೆತಗಳಲ್ಲಿ 25 ರನ್ ಗಳಿಸಿದ್ದರು.
ಪಿಚ್ ಹಾಗೂ ವಾತಾವರಣ
ವಾತಾವರಣ ಬಿಸಿ ಹಾಗೂ ಆರ್ದ್ರವಾಗಿರುತ್ತದೆ. ಎರಡನೇ ಇನಿಂಗ್ಸ್ನಲ್ಲಿ ಇಬ್ಬನಿ ಕಾಡಬಹುದು. ತಂಡಗಳು ಟಾಸ್ ಗೆದ್ದ ಮೇಲೆ ಮೊದಲಿಗೆ ಬೌಲಿಂಗ್ ಮಾಡಲು ಆದ್ಯತೆ ನೀಡಬಹುದು. ಈ ವರ್ಷದ ಐಪಿಎಲ್ ನಲ್ಲಿ ಇಲ್ಲಿ ಆಡಿದ 7 ಪಂದ್ಯಗಳಲ್ಲಿ ಚೇಸಿಂಗ್ ತಂಡಗಳು 5 ಬಾರಿ ಗೆದ್ದಿವೆ.
ರಾಜಸ್ಥಾನ ರಾಯಲ್ಸ್(ಸಂಭಾವ್ಯ): 1. ಯಶಸ್ವಿ ಜೈಸ್ವಾಲ್, 2. ಟಾಮ್ ಕೊಹ್ಲೆರ್-ಕಾಡ್ಮೋರ್, 3. ಸಂಜು ಸ್ಯಾಮ್ಸನ್(ನಾಯಕ, ವಿಕೆಟ್ ಕೀಪರ್), 4. ರಿಯಾನ್ ಪರಾಗ್, 5. ಧ್ರುವ್ ಜುರೆಲ್, 6. ಶಿಮ್ರೊನ್ ಹೆಟ್ಮೆಯರ್, 7. ರೊವ್ಮನ್ ಪೊವೆಲ್/ಕೇಶವ ಮಹಾರಾಜ್, 8. ಆರ್.ಅಶ್ವಿನ್, 9. ಟ್ರೆಂಟ್ ಬೌಲ್ಟ್, 10. ಅವೇಶ್ ಖಾನ್, 11. ಸಂದೀಪ್ ಶರ್ಮಾ, 12. ಯಜುವೇಂದ್ರ ಚಹಾಲ್.
ಸನ್ರೈಸರ್ಸ್ ಹೈದರಾಬಾದ್(ಸಂಭಾವ್ಯರು): 1. ಟ್ರಾವಿಸ್ ಹೆಡ್, 2. ಅಭಿಷೇಕ್ ಶರ್ಮಾ, 3. ರಾಹುಲ್ ತ್ರಿಪಾಠಿ, 4. ಐಡೆನ್ ಮಾರ್ಕ್ರಮ್/ಗ್ಲೆನ್ ಫಿಲಿಪ್ಸ್/ವಿಜಯಕಾಂತ್, 5.ನಿತಿಶ್ ಕುಮಾರ್ ರೆಡ್ಡಿ, 6. ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), 7. ಅಬ್ದುಲ್ ಸಮದ್, 8. ಶಹಬಾಝ್ ಅಹ್ಮದ್, 9. ಪ್ಯಾಟ್ ಕಮಿನ್ಸ್(ನಾಯಕ), 10. ಭುವನೇಶ್ವರ ಕುಮಾರ್, 11. ಮಯಾಂಕ್ ಮರ್ಕಂಡೆ, 12. ಟಿ. ನಟರಾಜನ್.
ಪಂದ್ಯ ಆರಂಭದ ಸಮಯ: ರಾತ್ರಿ 7:30
ಸ್ಥಳ: ಎಂ.ಚಿದಂಬರಂ ಸ್ಟೇಡಿಯಮ್, ಚೆನ್ನೈ.