ಐಪಿಎಲ್ ಸಾಕಷ್ಟು ವಿದೇಶಿ ಆಟಗಾರರನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಿದೆ : ಎಂ.ಎಸ್. ಧೋನಿ

Update: 2024-03-05 16:24 GMT

 ಮಹೇಂದ್ರ ಸಿಂಗ್ ಧೋನಿ | Photo: PTI 

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್(CSK)ಚೆನ್ನೈನಲ್ಲಿ ಮಾರ್ಚ್ 22ರಂದು ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮೂಲಕ ಐಪಿಎಲ್-2024ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಐಪಿಎಲ್ ಉದ್ಘಾಟನಾ ಪಂದ್ಯಕ್ಕಿಂತ ಮೊದಲು ಮಾತನಾಡಿದ ಸಿಎಸ್ಕೆ ನಾಯಕಮಹೇಂದ್ರ ಸಿಂಗ್ ಧೋನಿ, ವಿಶ್ವದೆಲ್ಲೆಡೆಯ ಆಟಗಾರರನ್ನು ಒಂದೇ ತಂಡದಲ್ಲಿ ಸೇರಿಸುವ ಮೂಲಕ ಐಪಿಎಲ್ ರೋಮಾಂಚಕಾರಿ ಟೂರ್ನಿಯಾಗಿದೆ. ಇದು ಇತರ ವಿದೇಶಿ ಆಟಗಾರರ ಬಗ್ಗೆ ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಅವಕಾಶ ಒದಗಿಸಿದೆ ಎಂದರು.

ಸ್ಟಾರ್ ಸ್ಪೋರ್ಟ್ಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಧೋನಿ, 2008ರ ಸಿಎಸ್ಕೆ ತಂಡದ ಕುರಿತು ಮಾತನಾಡಿದ್ದಾರೆ.

2008ರಲ್ಲಿ ಆಡಿರುವ ಚೆನ್ನೈ ತಂಡವು ಉತ್ತಮ ಸಮತೋಲಿತ ತಂಡವಾಗಿತ್ತು. ಅದರಲ್ಲಿ ಸಾಕಷ್ಟು ಆಲ್ರೌಂಡರ್ ಗಳಿದ್ದರು. ತಂಡದಲ್ಲಿ ಅಪಾರ ಅನುಭವಿ ಆಟಗಾರರಾದ ಮ್ಯಾಥ್ಯೂ ಹೇಡನ್, ಮೈಕ್ ಹಸ್ಸಿ, ಮುತ್ಯಯ್ಯ ಮುರಳೀಧರನ್, ಮಖಾಯ ಎನ್ಟಿನಿ ಹಾಗು ಜೇಕಬ್ ಓರಮ್ ಇದ್ದರು. ಒಂದೇ ಡ್ರೆಸ್ಸಿಂಗ್ ರೂಮ್ನಲ್ಲಿ ಇವರನ್ನು ಒಟ್ಟು ಸೇರಿಸಿ ಅವರನ್ನು ತಿಳಿದುಕೊಳ್ಳುವುದು ಸವಾಲಿನಿಂದ ಕೂಡಿತ್ತು ಎಂದು ಧೋನಿ ಹೇಳಿದ್ದಾರೆ.

ನೀವು ತಂಡವನ್ನು ಮುನ್ನಡೆಸುವಾಗ ನೀವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ನಾನು ಯಾವಾಗಲೂ ನಂಬುತ್ತೇನೆ. ನೀವು ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಂಡರೆ ಆತನ ಸಾಮರ್ಥ್ಯ, ದೌರ್ಬಲ್ಯಗಳನ್ನು ತಿಳಿದುಕೊಳ್ಳಬಹುದು. ಇದು ತಂಡ ಸರಿಯಾದ ದಿಕ್ಕಿನಲ್ಲಿ ಸಾಗಲು ನೆರವಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಸಿಎಸ್ಕೆ 2010, 2011, 2018, 2021 ಹಾಗೂ 2023ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಸಿಎಸ್ಕೆ ತಂಡವನ್ನು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಮುನ್ನಡೆಸಿದ್ದಲ್ಲದೆ 2010 ಹಾಗೂ 2014ರಲ್ಲಿ ಎರಡು ಬಾರಿ ಸಿಎಲ್ಟಿ-20 ಪ್ರಶಸ್ತಿ ಗೆಲ್ಲುವಲ್ಲಿಯೂ ನಾಯಕತ್ವವಹಿಸಿದ್ದರು.

ಐಪಿಎಲ್ ನನಗೆ ಸಾಕಷ್ಟು ವಿದೇಶಿ ಆಟಗಾರರನ್ನು ಅರ್ಥ ಮಾಡಿಕೊಳ್ಳಲು ಅವಕಾಶ ನೀಡಿತು. ನಾನು ಎದುರಾಳಿ ಆಟಗಾರರೊಂದಿಗೆ ಹೆಚ್ಚು ಮಾತನಾಡುವ ವ್ಯಕ್ತಿಯಾಗಿರಲಿಲ್ಲ. ಆದರೆ ಇತರ ಆಟಗಾರರ ಬಗ್ಗೆ ತಿಳಿದುಕೊಳ್ಳಲು, ಕ್ರಿಕೆಟ್ ಬಗ್ಗೆ ಅವರು ಏನು ಯೋಚಿಸುತ್ತಾರೆ, ಅವರ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಐಪಿಎಲ್ ಅವಕಾಶ ಒದಗಿಸಿದೆ. ಇದೆಲ್ಲವೂ ಐಪಿಎಲ್ ಅನ್ನು ತುಂಬಾ ಆಸಕ್ತಿದಾಯಕವಾಗಿಸಿದೆ ಎಂದು ಧೋನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News