ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸಲು ಬರುತ್ತಿದೆ 'ಐಪಿಎಲ್’
ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟ್ ಲೀಗ್ ಐಪಿಎಲ್ ಟ್ವೆಂಟಿ -20 ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಥ್ರಿಲ್ಲರ್ ಗೇಮ್ ಎನಿಸಿದ ಐಪಿಎಲ್ ನಿದ್ದೆಗೆಡಿಸುವ ಆಟ. ರೋಚಕತೆಯ ಆಟವನ್ನೇ ಬಂಡವಾಳವನ್ನಾಗಿಸಿ ಸಾಗುವ ಈ ಕ್ರಿಕೆಟ್ ಲೀಗ್ ಇತರ ಲೀಗ್ ಪಂದ್ಯಾಟಗಳಿಗಿಂತ ಮುಂದಿದೆ. 2008ರಲ್ಲಿ ಭಾರತದಲ್ಲಿ ಆರಂಭವಾದ ಈ ಮಿಲಿಯನ್ ಡಾಲರ್ ಟೂರ್ನಿ ಈ ಬಾರಿ 17ನೇ ಆವೃತ್ತಿಯನ್ನು ಕಾಣುತ್ತಿದೆ. ಹೌದು ‘ಐಪಿಎಲ್ ’ ಟ್ವೆಂಟಿ -20 ಕ್ರಿಕೆಟ್ ‘ಥ್ರಿಲ್ಲರ್ ಗೇಮ್ ’ ಮಾತ್ರವಲ್ಲ , ಬದಲಿಗೆ ರೋಚಕತೆ , ಭರ್ಜರಿ ಮನರಂಜನೆ, ಉತ್ಸಾಹ, ಹಿರಿಯರ ಅನುಭವ , ಕಿರಿಯರ ಚುರುಕುತನ , ಹೊಸ ಪ್ರತಿಭೆಗಳು ಎಲ್ಲಾ ಇರುತ್ತದೆ. ಹಳೆ ಬೇರು - ಹೊಸ ಚಿಗುರು ಕೂಡಿದ ಪಂದ್ಯಾಟವೇ ‘ಐಪಿಎಲ್ ’. ನಿದ್ದೆಗೆಡಿಸುವ ಐಪಿಎಲ್ ಪಂದ್ಯಾಟಕ್ಕೆ ಮಾರ್ಚ್ 22ರಂದು ಚಾಲನೆ ದೊರೆಯಲಿದೆ. ಹಿರಿಯ-ಕಿರಿಯ , ದೇಶೀಯ-ವಿದೇಶಿ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಇದೀಗ ಕಾತರದಿಂದ ಕಾದು ಕುಳಿತಿದ್ದಾರೆ.
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ಹಲವು ಬದಲಾವಣೆಗಳ ಹೊಸತನದೊಂದಿಗೆ ಈ ಬಾರಿ ಭಾರತದಲ್ಲಿ ನಡೆಯಲಿದೆ. ಜಾಗತಿಕ ಕುಟುಂಬವಾಗಿ ಕ್ರಿಕೆಟ್ ಲೋಕಕ್ಕೆ ಪರಿಚಯಿಸಲ್ಪಟ್ಟ ಐಪಿಎಲ್ ಚುಟುಕು ಕ್ರಿಕೆಟ್ ನಲ್ಲಿ ಹೊಡಿಬಡಿಯ ಆಟವೇ ಹೆಚ್ಚು ಆಕರ್ಷಣೆ. ಸತತ 17ನೇ ಆವೃತ್ತಿಯನ್ನು ಕಾಣುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಅಬಾಧಿತವಾಗಿ ನಡೆದಿರುವುದು ಈ ಪಂದ್ಯಾಟದ ವೈಶಿಷ್ಟ್ಯತೆಯಾಗಿದೆ .ಐಪಿಎಲ್ ಹೊಸ ತಲೆಮಾರಿನ ಕ್ರಿಕೆಟ್ ಆಗಿದ್ದು , ಮನರಂಜನೆಯ ಜೊತೆಗೆ ಹಲವು ಕುತೂಹಲಕಾರಿ ಸನ್ನಿವೇಶಗಳನ್ನು ಸೃಷ್ಟಿಸಿಯೂ ಸುದ್ದಿಯಾಗಿದೆ.
ಮಿಲಿಯನ್ ಡಾಲರ್ ಬೇಬಿ: ಐಪಿಎಲ್ ಟೂರ್ನಿಯನ್ನು ‘ಮಿಲಿಯನ್ ಡಾಲರ್ ಬೇಬಿ’ ಎಂದು ಕರೆಯಲಾಗುತ್ತದೆ. ಐಪಿಎಲ್ ಪಂದ್ಯಾಟ ಸದಾ ಕುತೂಹಲದ ಸೆಲೆಯಾಗಿ ಆಟಗಾರರಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಾ ಬಂದಿದೆ. ಥ್ರಿಲ್ಲರ್ ಗೇಮ್ ನ ಮಾದರಿಯಲ್ಲಿ ನಡೆಯುವ ಈ ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸ್ವದೇಶಿ-ವಿದೇಶಿ ಆಟಗಾರರ ಸ್ನೇಹ ಮಿಲನವಿದೆ . ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಪರ - ವಿರುದ್ಧವಾಗಿ ಹೋರಾಡುವ ಕೆಚ್ಚದೆಯ ಆಟಗಾರರು ಇಲ್ಲಿ ಸ್ನೇಹ ಜೀವಿಗಳು. ಇಲ್ಲಿ ಪ್ರತಿಯೊಬ್ಬರೂ ಹಣಕ್ಕಾಗಿ ಆಡುತ್ತಿರುವುದರಿಂದ ಕುರುಡು ಕಾಂಚಾಣದ ಝಣ ಝಣ ಸದ್ದು ಜೋರಾಗಿ ಕೇಳಿಸುತ್ತದೆ.
ʼಈ ಸಲ ಕಪ್ ನಮ್ದೇʼ
ಪ್ರತಿ ಐಪಿಎಲ್ ಪಂದ್ಯಾಟ ನಡೆದಾಗ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ ಸಿಬಿ) ತಂಡದ ಅಭಿಮಾನಿಗಳು ಹಾಗೂ ಆಟಗಾರರು ಹೇಳುವುದು ‘ಈ ಸಲ ಕಪ್ ನಮ್ದೇ ’ ಎಂದು. ಕಳೆದ 16 ಐಪಿಎಲ್ ಅವೃತ್ತಿಗಳನ್ನು ಆಡಿರುವ ಆರ್‌ಸಿಬಿ ತಂಡ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ, ಮೊನ್ನೆಯಷ್ಟೇ ಮುಕ್ತಾಯಗೊಂಡ ಡಬ್ಲ್ಯುಪಿಎಲ್ ಟ್ವೆಂಟಿ -20 ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡ ಎರಡನೇ ಪ್ರಯತ್ನದಲ್ಲೇ ಕಪ್ ಗೆದ್ದು ಸಂಭ್ರಮಿಸಿ ದಶಕದ ಕನಸು ನನಸು ಮಾಡಿದೆ. ಈ ಸಂಭ್ರಮದ ಖುಷಿಯಲ್ಲಿ ತೇಲಾಡುತ್ತಿರುವ ಆರ್‌ಸಿಬಿ ಅಭಿಮಾನಿಗಳು ಈ ಬಾರಿಯ ಐಪಿಎಲ್‌ನಲ್ಲಿ ‘ಕಪ್ ನಮ್ದೇ’ ಎನ್ನುವ ವಿಶ್ವಾಸ ದಲ್ಲಿದ್ದಾರೆ.
ಮೊದಲ ಟೂರ್ನಿಯೇ ರೋಚಕ
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟ್ ಲೀಗ್. ಯುವ ಆಟಗಾರರಿಗೆ ವೇದಿಕೆ, ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಛಾನ್ಸ್ ,ಆದಾಯ ಸೇರಿದಂತೆ ಎಲ್ಲಾ ರೀತಿಯಲ್ಲೂ ಐಪಿಎಲ್ ಇತರ ಲೀಗ್ ಕ್ರಿಕೆಟ್ ಪಂದ್ಯಾಟಗಳಿಗಿಂತಲೂ ಮುಂದಿದೆ. ಲಲಿತ್ ಮೋದಿಯ ಕನಸಿನ ಕೂಸಾಗಿದ್ದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟ ಅಬ್ಬರದ ಪ್ರಚಾರದೊಂದಿಗೆ ಕ್ರಿಕೆಟ್ ಜಗತ್ತಿಗೆ 2008ರಲ್ಲಿ ಕಾಲಿಟ್ಟಾಗ ಅದೊಂದು ಹುಚ್ಚಾಟವೆಂದು ಎಲ್ಲರೂ ಭಾವಿಸಿದ್ದರು. ಆದರೆ , ರೋಚಕ ರೋಮಾಂಚನದಿಂದ ಅನಿರೀಕ್ಷಿತ ಫಲಿತಾಂಶಗಳು ಬಂದಾಗ ಅಭಿಮಾನಿಗಳು ಖುಷಿಪಟ್ಟಿದ್ದರು . ಇದಕ್ಕೆ ಮೊದಲ ಐಪಿಎಲ್ ಟ್ವೆಂಟಿ-20 ಪಂದ್ಯಾಟದಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿದ್ದೇ ಭಾರೀ ಕುತೂಹಲ. ಸಾಕಷ್ಟು ಬಲಾಢ್ಯ ತಂಡಗಳು 2008ರ ಮೊದಲ ಐಪಿಎಲ್ ಪಂದ್ಯಾಟದಲ್ಲಿ ಆಡಿದ್ದರೂ ಚಾಣಾಕ್ಷ ನಾಯಕತ್ವದಿಂದ ಆಸ್ಟ್ರೇಲಿಯದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಚೊಚ್ಚಲ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿಸಿದ್ದು ಒಂದು ಅದ್ಭುತವೇ . ಯುವ ಪಡೆಯನ್ನೇ ಕಟ್ಟಿಕೊಂಡ ಶೇನ್ ವಾರ್ನ್ ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿಯ ಗರಿ ಮೂಡಿಸಿದ್ದರು. 2008ರಿಂದ ಆರಂಭಗೊಂಡ ಐಪಿಎಲ್ ಪಯಣ ಇದೀಗ ಸತತ 17ನೇ ಆವೃತ್ತಿಯನ್ನು ಕಾಣುತ್ತಿರುವುದು ಕೂಡ ಒಂದು ಇತಿಹಾಸ.
ಈ ಬಾರಿ 74 ಪಂದ್ಯಗಳು
2024ರ ಐಪಿಎಲ್‌ನಲ್ಲಿ ನಾಲ್ಕು ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 74 ಪಂದ್ಯಗಳು ನಡೆಯಲಿವೆ. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸುವ ನಿರೀಕ್ಷೆಯಿದೆ. ಈಗಾಗಲೇ ಮೊದಲ ಹಂತದ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದ್ದು ಮಾರ್ಚ್ 22ರಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಕ್ರಿಕೆಟ್ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಈ ಮಹತ್ವದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಯುವ ಪ್ರತಿಭೆಗಳಿಗೆ ವೇದಿಕೆ
ಐಪಿಎಲ್ ಟ್ವೆಂಟಿ-20 ಪಂದ್ಯಾಟದ ಪ್ರತಿಯೊಂದು ಪಂದ್ಯವೂ ರೋಚಕತೆಯನ್ನು ಕಾಣುತ್ತದೆ. ಈ ರೋಚಕತೆಯ ಆಟ ಕ್ರಿಕೆಟ್ ಪ್ರೇಮಿಗಳನ್ನು ಹೆಚ್ಚು ಪುಳಕಗೊಳಿಸುತ್ತದೆ. ಸೋಲು - ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಐಪಿಎಲ್ ಅವಕಾಶ ಮಾಡಿ ಕೊಟ್ಟಿದೆ. ಮೇಲಾಗಿ ಬಡ ಕ್ರಿಕೆಟಿಗರ ಹೊಟ್ಟೆ ತುಂಬಿಸುತ್ತಿರುವುದು ಕೂಡ ಇದೇ ಐಪಿಎಲ್. ಹಾಗಾಗಿ, ಐಪಿಎಲ್ ನಲ್ಲಿ ಸ್ಪರ್ಧಾತ್ಮಕ ಆಟವನ್ನು ನೋಡಬಹುದಾಗಿದೆ. ಐಪಿಎಲ್ ಪಂದ್ಯಾಟದಲ್ಲಿ ಪ್ರತಿ ಬಾರಿಯೂ ಒಬ್ಬೊಬ್ಬ ಕ್ರಿಕೆಟ್ ಆಟಗಾರರು ವಿಶೇಷವಾಗಿ ಗಮನ ಸೆಳೆದಿದ್ದಾರೆ. ಮನ್‌ಪ್ರೀತ್ ಗೋನಿ, ಸ್ವಪ್ನಿಲ್ ಅಸ್ನೋಡ್ಕರ್ , ಮನೀಷ್ ಪಾಂಡೆ, ಪಾಲ್ ವಾಲ್ತಾಟಿ , ಅಜಿಂಕ್ಯ ರಹಾನೆ , ರಾಬಿನ್ ಉತ್ತಪ್ಪ, ದೀಪಕ್ ಹೂಡಾ , ಸಂಜು ಸ್ಯಾಮ್ಸನ್, ಕೆ.ಎಲ್.ರಾಹುಲ್ , ಮಯಾಂಕ್ ಅಗರ್ ವಾಲ್ , ಜಸ್ಪ್ರೀತ್ ಬುಮ್ರಾ , ಶುಭಮನ್ ಗಿಲ್ , ಸೂರ್ಯಕುಮಾರ್ ಯಾದವ್ , ನಟರಾಜನ್ , ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ , ಋತುರಾಜ್ ಗಾಯಕ್ವಾಡ್ ಸೇರಿದಂತೆ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದು ಕೂಡ ಇದೇ ಐಪಿಎಲ್ ನಲ್ಲಿ.