ಐಪಿಎಲ್: ಸನ್‌ರೈಸರ್ಸ್ ಹೈದರಾಬಾದ್ ಗೆ ಪ್ಯಾಟ್ ಕಮಿನ್ಸ್ ನಾಯಕ
Update: 2024-03-04 15:09 GMT
ಹೊಸದಿಲ್ಲಿ: ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ 2024ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನಮ್ಮ ತಂಡದ ನೇತೃತ್ವವಹಿಸಲಿದ್ದಾರೆ ಎಂದು ಸನ್ ರೈಸರ್ಸ್ ಹೈದರಾಬಾದ್ ಸೋಮವಾರ ಪ್ರಕಟಿಸಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 20.50 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತೆಕ್ಕೆಗೆ ಸೇರಿದ್ದ 30ರ ಹರೆಯದ ಕಮಿನ್ಸ್ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಕಮಿನ್ಸ್ ಅವರು ದಕ್ಷಿಣ ಆಫ್ರಿಕಾದ ಐಡೆನ್ ಮರ್ಕ್ರಮ್ ರಿಂದ ನಾಯಕತ್ವದ ಹೊಣೆ ವಹಿಸಿಕೊಳ್ಳಲಿದ್ದಾರೆ. ಮರ್ಕ್ರಮ್ 2023ರ ಆವೃತ್ತಿಯ ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ನಾಯಕತ್ವವಹಿಸಿದ್ದರು.
ಕಮಿನ್ಸ್ ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದ್ದರು.