ನಾಳೆ ದುಬೈನಲ್ಲಿ ಐಪಿಎಲ್ ಆಟಗಾರರ ಹರಾಜು
ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಮಂಗಳವಾರ ದುಬೈಯ ಕೋಕಕೋಲಾ ಅರೀನಾದಲ್ಲಿ ನಡೆಯಲಿದೆ.
ಐಪಿಎಲ್ ಹರಾಜು ಜಗತ್ತಿನಾದ್ಯಂತದ ಆಟಗಾರರು ಮತ್ತು ಅಭಿಮಾನಿಗಳ ಗಮನವನ್ನು ಸೆಳೆದಿದೆ. ಯಾವ ತಂಡವು ಯಾವ ಆಟಗಾರರನ್ನು ಎಷ್ಟು ಬೆಲೆಗೆ ಖರೀದಿ ಮಾಡುತ್ತದೆ ಎನ್ನುವುದನ್ನು ಅಭಿಮಾನಿಗಳು ಕುತೂಹಲದಿಂದ ಗಮನಿಸುತ್ತಿದ್ದಾರೆ. ಆಟಗಾರರೂ ತಾವು ಎಷ್ಟು ಬೆಲೆಗೆ ಖರೀದಿಯಾಗಬಹುದು ಎಂಬ ಬಗ್ಗೆ ರೋಮಾಂಚಿತರಾಗಿದ್ದಾರೆ.
ಹರಾಜು ಹೇಗೆ ನಡೆಯುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ:
ಹರಾಜು ಎಲ್ಲಿ ಮತ್ತು ಯಾವಾಗ?
2024ರ ಆವೃತ್ತಿಯ ಐಪಿಎಲ್ ಹರಾಜು ದುಬೈಯ ಕೋಕಕೋಲಾ ಅರೀನಾದಲ್ಲಿ ಮಂಗಳವಾರ ನಡೆಯುತ್ತದೆ. ಅದು ದುಬೈ ಸಮಯ ಬೆಳಗ್ಗೆ 11:30ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 1:00 ಗಂಟೆಗೆ) ಆರಂಭಗೊಳ್ಳುತ್ತದೆ.
ನೇರಪ್ರಸಾರ
ಆಟಗಾರರ ಹರಾಜು ‘ಸ್ಟಾರ್ ಸ್ಪೋರ್ಟ್ಸ್’ ಜಾಲದಲ್ಲಿ ನೇರಪ್ರಸಾರಗೊಳ್ಳುತ್ತದೆ. ಅದು ಜಿಯೋ ಸಿನೇಮಾ ಆ್ಯಪ್‌ನಲ್ಲೂ ಲೈವ್‌ಸ್ಟ್ರೀಮ್ ಆಗುತ್ತದೆ.
ಎಷ್ಟು ಆಟಗಾರರ ನೋಂದಾಯಿಸಿದ್ದಾರೆ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ನೀಡಿರುವ ಮಾಹಿತಿಯ ಪ್ರಕಾರ, ಈ ವರ್ಷದ ಹರಾಜಿಗೆ 1166 ಆಟಗಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಎಷ್ಟು ಆಟಗಾರರು ಹರಾಜುಗೊಳ್ಳಬಹುದು?
ತಂಡಗಳು ತಮ್ಮ ಆಯ್ಕೆಯನ್ನು 333 ಆಟಗಾರರಿಗೆ ಸೀಮಿತಗೊಳಿಸಿವೆ. ಇದರಲ್ಲಿ 214 ಭಾರತೀಯ ಆಟಗಾರರು ಮತ್ತು 119 ವಿದೇಶಿ ಆಟಗಾರರು. ಈ ಪೈಕಿ 116 ಆಟಗಾರರು ತಮ್ಮ ರಾಷ್ಟ್ರೀಯ ತಂಡಗಳಲ್ಲಿ ಆಡಿದ್ದಾರೆ ಮತ್ತು 215 ಆಟಗಾರರು ಅಡಿಲ್ಲ. ಇಬ್ಬರು ಆಟಗಾರರು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಸೋಸಿಯೇಟ್ ಸದಸ್ಯ ದೇಶಗಳಿಗೆ ಸೇರಿದವರು.
ಈಗ 10 ತಂಡಗಳು 77 ಸ್ಥಾನಗಳನ್ನು ತುಂಬಿಸಿಕೊಳ್ಳಬೇಕಾಗಿವೆ. ಈ ಪೈಕಿ 30 ಸ್ಥಾನಗಳನ್ನು ವಿದೇಶಿ ಆಟಗಾರರು ತುಂಬಬೇಕಾಗಿದೆ.
ಹರಾಜು ಪ್ರಕ್ರಿಯೆ
ಬ್ಯಾಟರ್, ಆಲ್‌ರೌಂಡರ್, ವೇಗದ ಬೌಲರ್, ಸ್ಪಿನ್ನರ್ ಮತ್ತು ವಿಕೆಟ್‌ಕೀಪರ್ ಸೇರಿದಂತೆ ಆಟಗಾರರು ಯಾವ ವಿಭಾಗದಲ್ಲಿ ಪರಿಣತರು ಎನ್ನುವ ಆಧಾರದಲ್ಲಿ ಅವರನ್ನು 19 ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಗರಿಷ್ಠ ಮೂಲಬೆಲೆ ಎಷ್ಟು?
ಆಟಗಾರರ ಗರಿಷ್ಠ ಮೂಲಬೆಲೆಯನ್ನು 2 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಈ ಗುಂಪಿನಲ್ಲಿ 23 ಆಟಗಾರರು ಇದ್ದಾರೆ. ಈ ಗುಂಪಿನ ಪ್ರಮುಖ ಹೆಸರುಗಳೆಂದರೆ- ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಉಮೇಶ್ ಯಾದವ್ ಮತ್ತು ಶಾರ್ದುಲ್ ಠಾಕೂರ್.
15 ಆಟಗಾರರ ಮೂಲಬೆಲೆಯನ್ನು 1.5 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.
ಖರೀದಿಗೆ ತಂಡಗಳ ಬಳಿ ಎಷ್ಟು ಹಣ ಉಳಿದಿದೆ?
► ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)- 31.4 ಕೋಟಿ ರೂ.
► ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)- 28.95 ಕೋಟಿ ರು.
► ಗುಜರಾತ್ ಟೈಟಾನ್ಸ್ (ಕೆಕೆಆರ್)- 38.15 ಕೋಟಿ ರೂ.
► ಕೋಲ್ಕತ ನೈಟ್ ರೈಡರ್ಸ್- 32.7 ಕೋಟಿ ರೂ.
► ಲಕ್ನೋ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ)- 13.15 ಕೋಟಿ ರೂ.
► ಮುಂಬೈ ಇಂಡಿಯನ್ಸ್ (ಎಮ್‌ಐ)- 17.75 ಕೋಟಿ ರೂ.
► ಪಂಜಾಬ್ ಕಿಂಗ್ಸ್ (ಪಿಬಿಕೆಎಸ್)- 29.1 ಕೋಟಿ ರೂ.
► ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)- 23.25 ಕೋಟಿ ರೂ.
► ರಾಜಸ್ಥಾನ ರಾಯಲ್ಸ್ (ಆರ್‌ಆರ್)- 14.5 ಕೋಟಿ ರೂ.
► ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್)- 34 ಕೋಟಿ ರೂ.
ಹರಾಜುಗಾರ ಯಾರು?
ಐಪಿಎಲ್ ಆಟಗಾರರ ಹರಾಜನ್ನು ಮುಂಬೈಯ ಮಲ್ಲಿಕಾ ಸಾಗರ್ ನಡೆಸಿಕೊಡಲಿದ್ದಾರೆ. ಅವರು 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರರಾಗಲಿದ್ದಾರೆ. ಅವರಿಗೆ ಎರಡು ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನ ಆಟಗಾರರ ಹರಾಜನ್ನು ನಡೆಸಿಕೊಟ್ಟ ಅನಭವವಿದೆ. ಈ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ಹರಾಜನ್ನು ಅವರು ಡಿಸೆಂಬರ್ 9ರಂದು ನಡೆಸಿಕೊಟ್ಟಿದ್ದಾರೆ.