IPL | CSK ಗೆ ಗೆಲ್ಲಲು 174 ರನ್ ಗುರಿ ನೀಡಿದ RCB
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ RCB ತಂಡದ ಪರವಾಗಿ ವಿರಾಟ್ ಕೊಹ್ಲಿ, ತಂಡದ ಫಾಫ್ ಡು ಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡು ಪ್ಲೆಸಿಸ್ 23 ಎಸೆತಗಳಲ್ಲಿ 35 ರನ್ ಗಳಿಸಿದರು. 32 ರನ್ ಗಳನ್ನು 8 ಬೌಂಡರಿಗಳ ಮೂಲಕವೇ ಗಳಿಸಿದ್ದು ವಿಶೇಷವಾಗಿತ್ತು. 4 ಓವರ್‌ಗಳಲ್ಲಿ RCB ತಂಡದ ಮೊತ್ತ ಯಾವುದೇ ವಿಕೆಟ್ ನಷ್ಟವಿಲ್ಲದೇ 40 ದಾಟಿತ್ತು. ಕೊಹ್ಲಿ - ಫಾಫ್ ಡು ಪ್ಲೆಸಿಸ್ CSK ತವರು ಅಂಗಣದ ಬೌಲಿಂಗ್ ಪಿಚ್ ಅನ್ನು ಬ್ಯಾಟಿಂಗ್ ಪಿಚ್ ನತ್ತ ಬದಲಾಯಿಸುವ ಹಾಗೆ ಬಿರುಸಿನ ಆಟವಾಡುತ್ತಿದ್ದರು.
ಈ ಹಂತದಲ್ಲಿ CSK ನಾಯಕ ರಜತ್ ಋತ್‌ರಾಜ್ ಬೌಲಿಂಗ್ ಬದಲಾಯಿಸುವ ತಂತ್ರಕ್ಕೆ ಮೊರೆ ಹೋದರು. 5 ಓವರ್ ಎಸೆಯಲು ಮುಸ್ತಫಿಝರ್ರಹ್ಮಾನ್ ಕೈಗೆ ಬಾಲಿತ್ತರು. 4. 3 ನೇ ಓವರ್‌ನಲ್ಲಿ ಮುಸ್ತಫಿಝುರ್ರಹ್ಮಾನ್ ಅವರು ಎಸೆತದ ಎಸೆತಕ್ಕೆ ಫಾಫ್ ಡು ಪ್ಲೆಸಿಸ್ ಅವರು ಬೌಂಡರಿಗೆ ಎತ್ತುವ ಪ್ರಯತ್ನದಲ್ಲಿ ರಚಿನ್ ರವೀಂದ್ರಾ ಗೆ ಕ್ಯಾಚಿತ್ತರು. RCB ತಂಡವು ಮೊದಲ ವಿಕೆಟ್ ಕಳೆದುಕೊಂಡಾಗ ಚೆಪಾಕ್ ನ CSK ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಬಳಿಕ ಕ್ರೀಸ್ ಗೆ ಬಂದ ರಜತ್ ಪಾಟಿದಾರ್ ಮೂರು ಎಸೆತ ಎದುರಿಸಿ ಮುಸ್ತಫೀಝುರ್ರಹ್ಮಾನ್ ಎಸೆತದಲ್ಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚಿತ್ತು ಶೂನ್ಯಕ್ಕೆ ನಿರ್ಗಮಿಸಿದರು. ಅದರೊಂದಿಗೆ 4 ಓವರ್ ಮುಕ್ತಾಯಕ್ಕೆ 41 ರನ್ ಗಳಿಗೆ RCB 2 ವಿಕೆಗಳನ್ನು ಕಳೆದುಕೊಂಡಿತು.
RCB ಯ ಭರವಸೆಯ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಕ್ರೀಸ್ ಬಂದರು, ಒಂದು ಬಾಲ್ ಎದುರಿಸಿ ದೀಪಕ್ ಚಾಹರ್ ಎಸೆತದಲ್ಲಿ ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ಮ್ಯಾರಥಾನ್ ಗೆ ತಾವೂ ಸೇರಿಕೊಂಡರು. 2 ರನ್ ಗಳ ಅಂತರದಲ್ಲಿ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡ RCB ಸಂಕಷ್ಟಕ್ಕೆ ಸಿಲುಕಿತ್ತು.
ವಿರಾಟ್ ಕೊಹ್ಲಿಗೆ ಸಾಥ್ ನೀಡಲು ಕ್ರೀಸ್ ಗೆ ಬಂದ ಕ್ಯಾಮರೂನ್ ಗ್ರೀನ್ ರಕ್ಷಣಾತ್ಮಕ ಆಟವಾಡಿದರು. ತಾಳ್ಮೆಯ ಆಟವಾಡಿದ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 21 ರನ್ ಗಳಿಸಿದರು. ತಂಡವು 77 ರನ್ ಗಳಿಸಿದ್ದಾಗ 11.2 ಓವರ್ ನಲ್ಲಿ ಮುಸ್ತಫಿಝುರ್ರಹ್ಮಾನ್ ಎಸೆತದಲ್ಲಿ ರಚಿನ್ ರವೀಂದ್ರಾಗೆ ಕ್ಯಾಚ್ ನೀಡುವ ಮೂಲಕ ಕೊಹ್ಲಿ ಔಟ್ ಆದರು. ಕೊಹ್ಲಿಯನ್ನು ಹಿಂಬಾಲಿಸಿದ ಕ್ಯಾಮರೂನ್ ಗ್ರೀನ್ 11.4 ನೇ ಓವರ್ ನಲ್ಲಿ 18 ರನ್ ಗಳಿಸಿದ್ದಾಗ ಮುಸ್ತಫಿಝುರ್ರಹ್ಮಾನ್ ಗೆ ಕ್ಲೀನ್ ಬೌಲ್ಡ್ ಆದರು. ಅದರೊಂದಿಗೆ RCB ಯ 5 ನೇ ವಿಕೆಟ್ ಪತನವಾಯಿತು.
78 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ RCB ಯನ್ನು 173 ರನ್ ಗೆ ಕೊಂಡೊಯ್ದಿದ್ದು ಇಬ್ಬರು ವಿಕೆಟ್ ಕೀಪರ್ ಗಳ ಬ್ಯಾಟಿಂಗ್. ಸ್ಪೋಟಕ ಬ್ಯಾಟ್ ಬೀಸಿದ ಅನುಜ್ ರಾವತ್, ದಿನೇಶ್ ಕಾರ್ತಿಕ್ CSK ಬೌಲರ್ ಗಳನ್ನು ದಂಡಿಸಿದರು. 25 ಎಸೆತ ಎದುರಿಸಿದ ಅನುಜ್ ರಾವತ್ 4 ಬೌಂಡರಿ 3 ಸಿಕ್ಸರ್ ಗಳೊಂದಿಗೆ 48 ರನ್ ಗಳಿಸಿ, ಕೊನೆಯ ಎಸೆತದಲ್ಲ ರನೌಟ್ ಆದರು. 26 ಎಸೆತ ಎದುರಿಸಿದ ದಿನೇಶ್ ಕಾರ್ತಿಕ್ 2 ಸಿಕ್ಸರ್ 3 ಬೌಂಡರಿಗಳೊಂದಿಗೆ 38 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ 8.2 ಓವರ್ ಗಳಲ್ಲಿ ಈ ವಿಕೆಟ್ ಕೀಪರ್ ಬ್ಯಾಟರ್ ಗಳು ತಂಡಕ್ಕೆ 95 ರನ್ ಗಳನ್ನು ಪೇರಿಸಿ, ದೊಡ್ಡ ಕೊಡುಗೆ ನೀಡಿದರು.
CSK ಪರ ಮುಸ್ತಫಿಝುರ್ರಹ್ಮಾನ್ ಮಿಂಚಿನ ದಾಳಿ ನಡೆಸಿ 4 ವಿಕೆಟ್ ಕಿತ್ತರು. ದೀಪಕ್ ಚಹರ್ ಒಂದು ವಿಕೆಟ್ ಗೆ ತೃಪ್ತಿ ಪಟ್ಟುಕೊಂಡರು.