ಜಾವೆಲಿನ್ ಎಸೆತ | ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಫೈನಲ್ ಗೆ
ಪ್ಯಾರಿಸ್ : ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ತನ್ನ ಅಮೋಘ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಒಲಿಂಪಿಕ್ ಗೇಮ್ಸ್ ನಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿದ್ದ 16 ಜಾವೆಲಿನ್ ಎಸೆತಗಾರರ ಪೈಕಿ ಮೊದಲಿಗರಾಗಿ ಕಣಕ್ಕಿಳಿದ ಚೋಪ್ರಾ ತನ್ನ ಮೊದಲ ಪ್ರಯತ್ನದಲ್ಲಿಯೇ 89.34 ಮೀ.ದೂರಕ್ಕೆ ಈಟಿಯನ್ನು ಎಸೆದು ಫೈನಲ್ ಸುತ್ತಿಗೆ ಅರ್ಹತೆ ಪಡೆದರು. ಹಾಲಿ ವಿಶ್ವ ಚಾಂಪಿಯನ್ ಚೋಪ್ರಾ ಈ ವರ್ಷ ನೀಡಿರುವ ಶ್ರೇಷ್ಠ ಪ್ರದರ್ಶನ ಇದಾಗಿದೆ. ಮಾತ್ರವಲ್ಲ ಜಾಗತಿಕ ಚಾಂಪಿಯನ್ಶಿಪ್ ನಲ್ಲಿ ನೀರಜ್ ಅವರ ಅತ್ಯುತ್ತಮ ನಿರ್ವಹಣೆ ಇದಾಗಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ನೀಡಿರುವ ಅಮೋಘ ಪ್ರದರ್ಶನವನ್ನು ನೆನಪಿಸಿದ 26ರ ಹರೆಯದ ಚೋಪ್ರಾ ತನ್ನ ಮೊದಲ ಎಸೆತದಲ್ಲೇ ಸಲೀಸಾಗಿ ನೇರ ಅರ್ಹತಾ ಗುರುತು 84 ಮೀ.ಅನ್ನು ಮೀರಿ ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರು.
32 ಜಾವೆಲಿನ್ ಎಸೆತಗಾರರನ್ನು ಎ ಹಾಗೂ ಬಿ ಗುಂಪುಗಳಾಗಿ ವಿಂಗಡಿಸಲಾಗಿದ್ದು ನೀರಜ್ ಎಲ್ಲರಿಗಿಂತ ಶ್ರೇಷ್ಠ ಪ್ರದರ್ಶನ ನೀಡಿ ಸತತ ಎರಡನೇ ಚಿನ್ನದ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಚೋಪ್ರಾ ಅವರಿಗೆ ಒಲಿಂಪಿಕ್ಸ್ ಜಾವೆಲಿನ್ ಎಸೆತದ ಇತಿಹಾಸದಲ್ಲಿ ಸತತ 2ನೇ ಚಿನ್ನ ಗೆದ್ದ ವಿಶ್ವದ ಐದನೇ ಕ್ರೀಡಾಪಟು ಎನಿಸಿಕೊಳ್ಳುವ ಅಪೂರ್ವ ಅವಕಾಶ ಒದಗಿಬಂದಿದೆ. ಒಂದು ವೇಳೆ ಚೋಪ್ರಾ ಆಗಸ್ಟ್ 8ರಂದು ನಡೆಯುವ ಫೈನಲ್ ನಲ್ಲಿ ಚಿನ್ನದ ಪದಕ ಜಯಿಸಿದರೆ ಒಲಿಂಪಿಕ್ಸ್ ನ ವೈಯಕ್ತಿಕ ಕ್ರೀಡೆಯಲ್ಲಿ ಈ ಸಾಧನೆ ಮಾಡಿದ ಮೊದಲಿಗನಾಗಲಿದ್ದಾರೆ. ಶಟ್ಲರ್ ಪಿ.ವಿ.ಸಿಂಧು(ಒಂದು ಬೆಳ್ಳಿ, ಒಂದು ಕಂಚು)ಕುಸ್ತಿಪಟು ಸುಶೀಲ್ ಕುಮಾರ್(ಒಂದು ಬೆಳ್ಳಿ, ಒಂದು ಕಂಚು) ಹಾಗೂ ಶೂಟರ್ ಮನು ಭಾಕರ್(ಎರಡು ಕಂಚು)ಸ್ವತಂತ್ರ ಭಾರತದಲ್ಲಿ ತಲಾ 2 ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ ಅಥ್ಲೀಟ್ಗಳಾಗಿದ್ದಾರೆ.
►ಅರ್ಹತಾ ಸುತ್ತಿನಲ್ಲಿ ನೀರಜ್ ಗೆ ಅಗ್ರ ಸ್ಥಾನ
ಎ ಹಾಗೂ ಬಿ ಎರಡೂ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೋಪ್ರಾ ಅಗ್ರ ಸ್ಥಾನ ಪಡೆದಿದ್ದು, ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್(88.63ಮೀ.) ಬಿ ಗುಂಪಿನಲ್ಲಿ 2ನೇ ಹಾಗೂ ಎಲ್ಲ ಸ್ಪರ್ಧಿಗಳ ಪೈಕಿ 2ನೇ ಸ್ಥಾನ ಪಡೆದರು. ಜರ್ಮನಿಯ ಜುಲಿಯನ್ ವೆಬೆರ್ ಒಟ್ಟಾರೆ 3ನೇ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನದ ನದೀಮ್ ಅರ್ಷದ್ 4ನೇ, ಕೀನ್ಯದ ಜುಲಿಯಸ್ ಯೆಗೊ 5ನೇ, ಬ್ರೆಝಿಲ್ನ ಮೌರಿಸಿಯೊ 6ನೇ, ಝೆಕ್ನ ಜೇಕಬ್ ವಡ್ಲೆಚ್ 7ನೇ, ಫಿನ್ಲ್ಯಾಂಡ್ನ ಟೋನಿ ಕೆರಾನೆನ್ 8ನೇ ಸ್ಥಾನ ಪಡೆದಿದ್ದಾರೆ.
►ಎರಡನೇ ಜೀವನಶ್ರೇಷ್ಠ ಪ್ರದರ್ಶನ
89.34 ಮೀ. ದೂರಕ್ಕೆ ಈಟಿಯನ್ನು ಎಸೆದಿರುವ ಹರ್ಯಾಣದ ಅಥ್ಲೀಟ್ ಚೋಪ್ರಾ ವೃತ್ತಿಬದುಕಿನಲ್ಲಿ 2ನೇ ಶ್ರೇಷ್ಠ ಪ್ರದರ್ಶನ ನೀಡಿದರು. 2022ರಲ್ಲಿ ಸ್ಟಾಕ್ಹೋಮ್ ಡೈಮಂಡ್ ಲೀಗ್ ನಲ್ಲಿ 89.44 ಮೀ.ದೂರಕ್ಕೆ ಈಟಿ ಎಸೆದು ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಚೋಪ್ರಾ ಇಂದಿನ ಪ್ರದರ್ಶನದ ಮೂಲಕ ತನ್ನ ಫಿಟ್ನೆಸ್ ಗೆ ಸಂಬಂಧಿಸಿದ ಕಳವಳವನ್ನು ದೂರ ಮಾಡಿದರು.
►ನಿರಾಶೆಗೊಳಿಸಿದ ಕಿಶೋರ್
ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿದ್ದ ಭಾರತದ ಇನ್ನೋರ್ವ ಸ್ಪರ್ಧಿ, ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಕಿಶೋರ್ ಜೆನಾ ಎ ಗುಂಪಿನಿಂದ ಕಣಕ್ಕಿಳಿದು 80.73 ಮೀ.ದೂರಕ್ಕೆ ಜಾವೆಲಿನ್ ಎಸೆದು ನಿರಾಸೆಗೊಳಿಸಿದರು.
ಎ ಗುಂಪಿನಲ್ಲಿ 9ನೇ ಸ್ಥಾನ ಪಡೆದ ಕಿಶೋರ್ ಒಟ್ಟಾರೆ 18ನೇ ಸ್ಥಾನ ಪಡೆದರು. ಗುರುವಾರ 12 ಸ್ಪರ್ಧಿಗಳ ನಡುವೆ ನಡೆಯುವ ಜಾವೆಲಿನ್ ಎಸೆತದ ಫೈನಲ್ ನಲ್ಲಿ ಅರ್ಹತೆ ಪಡೆಯುವ ರೇಸ್ನಿಂದ ಹೊರಗುಳಿದರು.
ಹಾಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಬಿ ಗುಂಪಿನಿಂದ ಸ್ಪರ್ಧಿಸಿ 86.59 ಮೀ.ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ಗ್ರೆನಡಾದ ಹಿರಿಯ ಕ್ರೀಡಾಪಟು ಆ್ಯಂಡರ್ಸನ್ ಪೀಟರ್ಸ್ ಕೂಡ 88.63 ಮೀ.ದೂರಕ್ಕೆ ಜಾವೆಲಿನ್ ಎಸೆದು ಬಿ ಗುಂಪಿನಿಂದ ಫೈನಲ್ಗೆ ಪ್ರವೇಶಿಸಿದರು.
ನೀರಜ್ ಚೋಪ್ರಾ ಅವರು ಮೊದಲ ಎಸೆತದಲ್ಲೇ ಫೈನಲ್ಗೆ ಅರ್ಹತೆ ಪಡೆದ ಕಾರಣ ಅವರ ಪ್ರದರ್ಶನವು ಕೆಲವೇ ನಿಮಿಷಗಳಲ್ಲಿ ಕೊನೆಗೊಂಡಿತು.
ಜರ್ಮನಿಯ ಜುಲಿಯನ್ ವೆಬೆರ್ 87.76 ಮೀ.ದೂರಕ್ಕೆ ಜಾವೆಲಿನ್ ಎಸೆದು ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರು. ಕೀನ್ಯದ ಮಾಜಿ ವಿಶ್ವ ಚಾಂಪಿಯನ್ ಜುಲಿಯಸ್ ಯೆಗೊ(85.97 ಮೀ.) ಹಾಗೂ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಜಾಕಬ್ ವೆಡ್ಲೆಚ್(85.63 ಮೀ.) ಎ ಗುಂಪಿನಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ಝೆಕ್ ಗಣರಾಜ್ಯದ ವೆಡ್ಲೆಚ್ ಈ ವರ್ಷ ದೋಹಾ ಡೈಮಂಡ್ ಲೀಗ್ ನಲ್ಲಿ ಚೋಪ್ರಾರನ್ನು ಸೋಲಿಸಿದ ಏಕೈಕ ಜಾವೆಲಿನ್ ಎಸೆತಗಾರನಾಗಿದ್ದಾರೆ. ಮೊದಲ ಸುತ್ತಿನ ಎಸೆತದಲ್ಲಿ 85.63 ಮೀ ದೂರಕ್ಕೆ ಜಾವೆಲಿನ್ ಎಸೆದು ಒಟ್ಟಾರೆ 7ನೇ ಸ್ಥಾನ ಪಡೆದಿದ್ದಾರೆ.
ಫಿನ್ಲ್ಯಾಂಡ್ ನ ಟೋನಿ ಕೆರಾನೆನ್(85.27 ಮೀ.) ಸ್ವಯಂ ಆಗಿ ಅರ್ಹತಾ ಗುರುತನ್ನು ದಾಟಿದ ನಾಲ್ಕನೇ ಅಥ್ಲೀಟ್ ಆಗಿದ್ದಾರೆ.
84 ಮೀ.ಗಿಂತ ಹೆಚ್ಚು ದೂರಕ್ಕೆ ಈಟಿ ಎಸೆದ ಸ್ಪರ್ಧಿಗಳು ಇಲ್ಲವೇ ಎ ಹಾಗೂ ಬಿ ಗುಂಪಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ 12 ಕ್ರೀಡಾಳುಗಳು ಫೈನಲ್ಗೆ ತೇರ್ಗಡೆಯಾಗುತ್ತಾರೆ. ಇಂದು 9 ಜಾವೆಲಿನ್ ಎಸೆತಗಾರರು 84 ಮೀ.ಗೂ ಅಧಿಕ ದೂರಕ್ಕೆ ಜಾವೆಲಿನ್ ಎಸೆದರು. ಇದು ಸ್ಪರ್ಧಾವಳಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿತ್ತು.