ಹಾರ್ದಿಕ್ ಪಾಂಡ್ಯಗೆ ಜಯ್ ಶಾ ಆಲಿಂಗನ, ರೋಹಿತ್ ಚುಂಬನ!
ಹೊಸದಿಲ್ಲಿ: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಟ್ರೋಲ್ ಗೆ ಒಳಗಾಗಿ, ನಿಂದಿಸಲ್ಪಟ್ಟು, ಅವಮಾನಿಸಲ್ಪಟ್ಟ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಶನಿವಾರ ರಾತ್ರಿ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಭಾವುಕರಾದರು. ದಕ್ಷಿಣ ಆಫ್ರಿಕಾವನ್ನು ರೋಚಕ ಹೋರಾಟದಲ್ಲಿ ಏಳು ರನ್ ಗಳಿಂದ ಸೋಲಿಸುತ್ತಿದ್ದಂತೆಯೇ ಆನಂದಭಾಷ್ಪ ಕಟ್ಟೆಯೊಡೆಯಿತು.
ಭಾರತ ತಂಡ ಹನ್ನೊಂದು ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಿದ್ದಂತೇ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಹಾರ್ದಿಕ್ ಪಾಂಡ್ಯ ಅವರನ್ನು ಆಲಂಗಿಸಿ, ಎತ್ತಿಕೊಂಡರು. ಲೈವ್ ಚಾಟ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ರೋಹಿತ್ ಶರ್ಮಾ ಅವರಿಂದ ಚುಂಬನದ ಉಡುಗೊರೆ ಸಿಕ್ಕಿತು!
"ಇದಕ್ಕೆ ತುಂಬಾ ಅರ್ಥ ಇದೆ. ನಾವು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ; ಆದರೆ ಕ್ಲಿಕ್ ಆಗುತ್ತಿರಲಿಲ್ಲ. ಆದರೆ ಇಂದು ಇಡೀ ದೇಶದ ಬಯಕೆಯನ್ನು ನಾವು ಈಡೇರಿಸಿದ್ದೇವೆ. ನನಗೆ ತೀರಾ ವಿಶೇಷ.ಕಳೆದ ಆರು ತಿಂಗಳಲ್ಲಿ ನಾನು ಒಂದು ಶಬ್ದವನ್ನೂ ಆಡಿರಲಿಲ್ಲ. ನಾನು ಕಠಿಣ ಪರಿಶ್ರಮ ಹಾಕುತ್ತಲೇ ಬಂದರೆ, ನಾನು ಮಿಂಚಬಲ್ಲೆ ಹಾಗೂ ನಾನು ಏನನ್ನೂ ಮಾಡಬಲ್ಲೆ ಎಂಬ ವಿಶ್ವಾಸ ಇತ್ತು" ಎಂದು ಗೆಲುವಿನ ಬಳಿಕ ಹಾರ್ದಿಕ್ ಹೇಳಿದರು.
2007ರ ಚಾಂಪಿಯನ್ ತಂಡ ಒಣ ಪಿಚ್ ನಲ್ಲಿ ಬ್ಯಾಟಿಂಗ್ ಆಯ್ದುಕೊಂಡು ಅಗ್ರ ಕ್ರಮಾಂಕದ ಆಟಗಾರರಿಂದ ಪ್ರದರ್ಶನ ಕಂಡುಬರದಿದ್ದರೂ, ಸ್ಪರ್ಧಾತ್ಮಕ ಮೊತ್ತ (7 ವಿಕೆಟ್ ಗೆ 176) ಗಳಿಸಲು ಸಾಧ್ಯವಾಯಿತು. ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೊದಲ ಅರ್ಧಶತಕ (76) ಬಾರಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳನ್ನು ಹೊಡೆದು ತಂಡಕ್ಕೆ ನೆರವಾದರು.
ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (39), ಟ್ರಿಸ್ಟನ್ ಸ್ಟಬ್ಸ್ (31) ಮತ್ತು ಹೆನ್ರಿಚ್ ಕ್ಲಾಸನ್ (52) ಅವರ ತೀವ್ರ ಪ್ರತಿರೋಧದ ಹೊರತಾಗಿಯೂ ಬಿಗಿ ಬೌಲಿಂಗ್ ದಾಳಿಯಿಂದ ಭಾರತೀಯ ಬೌಲರ್ಗಳು ದಕ್ಷಿಣ ಆಫ್ರಿಕಾವನ್ನು 169 ರನ್ ಗಳಿಗೆ ಕಟ್ಟಿಹಾಕಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.