50ಕ್ಕೂ ಅಧಿಕ ರನ್ ಗಳಿಕೆಯಲ್ಲಿ ಶತಕ ಪೂರೈಸಿದ ಜೋ ರೂಟ್

Update: 2024-12-07 16:18 GMT

ಜೋ ರೂಟ್ | PC : PTI

ವೆಲ್ಲಿಂಗ್ಟನ್ : ಟೆಸ್ಟ್ ಕ್ರಿಕೆಟ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಕೆಯಲ್ಲಿ ಶತಕ ಪೂರೈಸಿದ ಇಂಗ್ಲೆಂಡ್‌ನ ಮೊದಲ ಹಾಗೂ ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿರುವ ಜೋ ರೂಟ್ ಅವರು ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರು ಮೂಡಿಸಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ನಡೆದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ 76 ಎಸೆತಗಳಲ್ಲಿ ತನ್ನ 65ನೇ ಅರ್ಧಶತಕ ಗಳಿಸುವ ಮೂಲಕ ರೂಟ್ ಈ ಸಾಧನೆ ಮಾಡಿದರು.

ತನ್ನ 151ನೇ ಟೆಸ್ಟ್ ಪಂದ್ಯವನ್ನು ಆಡಿದ ರೂಟ್ ಅವರು ಈ ಮಹತ್ವದ ಸಾಧನೆಯ ಮೂಲಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 33ರ ಹರೆಯದ ರೂಟ್ 276 ಇನಿಂಗ್ಸ್‌ಗಳಲ್ಲಿ 35 ಶತಕ ಹಾಗೂ 65 ಅರ್ಧಶತಕಗಳ ಸಹಿತ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 12,853 ರನ್ ಗಳಿಸಿದ್ದಾರೆ.

ರೂಟ್ ಅವರು ಇದೀಗ ಸಚಿನ್ ತೆಂಡುಲ್ಕರ್, ಜಾಕ್ ಕಾಲಿಸ್ ಹಾಗೂ ರಿಕಿ ಪಾಂಟಿಂಗ್ ಅವರನ್ನೊಳಗೊಂಡ ಗಣ್ಯರ ಗುಂಪಿಗೆ ಸೇರಿದ್ದಾರೆ. ಈ ಮೂವರು ಕ್ರಿಕೆಟ್ ದಿಗ್ಗಜರು ಟೆಸ್ಟ್ ಕ್ರಿಕೆಟ್‌ನಲ್ಲಿ 50 ಪ್ಲಸ್ ಸ್ಕೋರ್ ಗಳಿಕೆಯಲ್ಲಿ ಶತಕವನ್ನು ಪೂರೈಸಿದ್ದಾರೆ. ತೆಂಡುಲ್ಕರ್ 119 ಬಾರಿ 50 ಪ್ಲಸ್ ಸ್ಕೋರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ರೂಟ್ ದೀರ್ಘ ಸಮಯದಿಂದ ಕಾಡುತ್ತಿದ್ದ ಕಳಪೆ ಪ್ರದರ್ಶನದಿಂದ ಹೊರ ಬಂದ ನಂತರ ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಮುಲ್ತಾನ್‌ನಲ್ಲಿ 262 ರನ್ ಗಳಿಸಿದ ನಂತರ ರೂಟ್ ರನ್‌ಗಾಗಿ ಪರದಾಟ ನಡೆಸಿದ್ದರು.

50 ಪ್ಲಸ್ ಸ್ಕೋರ್‌ನಲ್ಲಿ ಐತಿಹಾಸಿಕ ಸಾಧನೆಯ ನಂತರ ರೂಟ್ ಮತ್ತೊಂದು ಮಹತ್ವದ ಮೈಲಿಗಲ್ಲಿನತ್ತ ಚಿತ್ತ ಹರಿಸಿದ್ದಾರೆ. ಈ ವರ್ಷ 1,417 ರನ್ ಗಳಿಸಿರುವ ರೂಟ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಹಲವು ಬಾರಿ 1,500 ಟೆಸ್ಟ್ ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಲು ಕೇವಲ 83 ರನ್ ಅಗತ್ಯವಿದೆ. ರಿಕಿ ಪಾಂಟಿಂಗ್ ಮಾತ್ರ 2003 ಹಾಗೂ 2005ರಲ್ಲಿ ಈ ಸಾಧನೆ ಮಾಡಿದ್ದಾರೆ. ರೂಟ್ ಅವರು 2021ರಲ್ಲಿ 1,500 ರನ್ ಕ್ರಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News