ಮೊಣಕಾಲು ನೋವು ಹಿನ್ನೆಲೆ: ಏಶ್ಯನ್ ಗೇಮ್ಸ್ ನಿಂದ ಹೊರಗುಳಿದ ವಿನೇಶ್ ಫೋಗಟ್

Update: 2023-08-15 16:51 GMT

ವಿನೇಶ್ ಫೋಗಟ್ | Photo: PTI



ಹೊಸದಿಲ್ಲಿ: ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ನೇರ ಪ್ರವೇಶ ಪಡೆದಿದ್ದ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, ದುರದೃಷ್ಟವಶಾತ್ ಮುಂಬರುವ ಚೀನಾದ ಹಾಂಗ್ಝೌನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ಅಸಮರ್ಥಳಾಗಿರುವೆ ಎಂದು ಮಂಗಳವಾರ ಹೇಳಿದ್ದಾರೆ. ಏಶ್ಯನ್ ಗೇಮ್ಸ್ ಟ್ರಯಲ್ಸ್ ನಿಂದ ವಿನೇಶ್ ಹಾಗೂ ಬಜರಂಗ್ ಪುನಿಯಾಗೆ ವಿನಾಯಿತಿ ನೀಡಿದ್ದ ನಿರ್ಧಾರವು ಕುಸ್ತಿ ಸಮುದಾಯದಲ್ಲಿ ವಿವಾದವನ್ನು ಹುಟ್ಟುಹಾಕಿತ್ತು. ನಿರ್ದಿಷ್ಟ ಉದ್ದೇಶಕ್ಕಾಗಿನ ಸಮಿತಿಯು ಟೀಕೆಯನ್ನು ಎದುರಿಸಿತ್ತು.

ಮೊಣಕಾಲು ನೋವಿನಿಂದ ಬಳಲುತ್ತಿರುವ ವಿನೇಶ್ಗೆ ಸೆಪ್ಟಂಬರ್ 23ರಿಂದ ಹಾಂಗ್ಝೌನಲ್ಲಿ ಆರಂಭವಾಗಲಿರುವ ಕ್ರೀಡಾ ಹಬ್ಬದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ನಾನು ಅತ್ಯಂತ ಬೇಸರದ ಸುದ್ದಿ ಹಂಚಿಕೊಳ್ಳಲು ಬಯಸುವೆ. ಕೆಲವು ದಿನಗಳ ಹಿಂದೆ ಆಗಸ್ಟ್ 13ರಂದು ತರಬೇತಿಯ ವೇಳೆ ನನ್ನ ಎಡ ಮೊಣಕಾಲಿಗೆ ಗಾಯವಾಗಿತ್ತು. ಸ್ಕಾನಿಂಗ್ ಹಾಗೂ ಪರೀಕ್ಷೆಗಳ ನಂತರ ಗಾಯದಿಂದ ಚೇತರಿಸಿಕೊಳ್ಳಲು ಸರ್ಜರಿ ಒಂದೇ ಮಾರ್ಗ ಎಂದು ವೈದ್ಯರು ಹೇಳಿದ್ದಾರೆ. ನಾನು ಮುಂಬೈನಲ್ಲಿ ಆಗಸ್ಟ್ 17ರಂದು ಸರ್ಜರಿಗೆ ಒಳಗಾಗುವೆ. 2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಜಯಿಸಿದ್ದ ಚಿನ್ನದ ಪದಕ ಉಳಿಸಿಕೊಳ್ಳುವುದು ನನ್ನ ಕನಸಾಗಿತ್ತು. ಆದರೆ ದುರದೃಷ್ಟವಶಾತ್ ಈ ಗಾಯದ ಸಮಸ್ಯೆಯು ನನ್ನನ್ನು ಭಾಗವಹಿಸದಂತೆ ಮಾಡಿದೆ ಎಂದು ಫೋಗಟ್ ಎಕ್ಸ್ ನಲ್ಲಿ ಬರೆದಿದ್ದಾರೆ. ಏಶ್ಯನ್ ಗೇಮ್ಸ್ ನಲ್ಲಿ ವಿನೇಶ್ ಹಾಗೂ ಬಜರಂಗ್ಗೆ ನೇರ ಪ್ರವೇಶ ನೀಡಿರುವುದನ್ನು ಪ್ರಶ್ನಿಸಿ ಅಂತಿಮ್ ಪಾಂಘಾಲ್ ಹಾಗೂ ಸುಜಿತ್ ಕಲ್ಕಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

ಪಾಂಘಾಲ್ 53 ಕೆಜಿ ಟ್ರಯಲ್ ನಲ್ಲಿ ಜಯ ಸಾಧಿಸಿದ್ದು, ವಿಶಾಲ್ ಕಾಲಿರಾಮನ್ 65 ಕೆಜಿ ತೂಕ ವಿಭಾಗದಲ್ಲಿ ಜಯ ಸಾಧಿಸಿದ್ದರು. ಈ ಇಬ್ಬರನ್ನು ಗೇಮ್ಸ್ ನಲ್ಲಿ ಮೀಸಲು ಆಟಗಾರರನ್ನಾಗಿ ನೇಮಿಸಲಾಗಿತ್ತು.

ನಾನು ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಮೀಸಲು ಆಟಗಾರರನ್ನು ಏಶ್ಯನ್ ಗೇಮ್ಸ್ ಗೆ ಕಳುಹಿಸಬಹುದು ಎಂದು ವಿನೇಶ್ ಹೇಳಿದರು.

19ರ ಹರೆಯದ ಪಾಂಘಾಲ್ ಪ್ರಸಕ್ತ ಜೋರ್ಡನ್ ನಲ್ಲಿದ್ದು ಅಂಡರ್-20 ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಅವರು ಫೋಗಟ್ ಬದಲಿಗೆ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಿಮ್ಮ ಬೆಂಬಲ ಹೀಗೇಯೇ ಮುಂದುವರಿಯಬೇಕೆಂದು ಎಲ್ಲ ಅಭಿಮಾನಿಗಳಲ್ಲಿ ವಿನಂತಿಸಲು ಬಯಸುವೆ. ಶೀಘ್ರದಲ್ಲಿ ನಾನು ಕುಸ್ತಿಕಣಕ್ಕೆ ಮರಳುವೆ. ಪ್ಯಾರಿಸ್ 2024ರ ಒಲಿಂಪಿಕ್ಸ್ ಗೆ ಸಜ್ಜಾಗುವೆ. ನಿಮ್ಮ ಬೆಂಬಲ ನನಗೆ ಸಾಕಷ್ಟು ಶಕ್ತಿ ತುಂಬುತ್ತದೆ ಎಂದು ವಿನೇಶ್ ಎಕ್ಸ್ ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News