ಮತ್ತೊಮ್ಮೆ ಭದ್ರತೆ ಉಲ್ಲಂಘನೆ | ಮೈದಾನದೊಳಗೆ ನುಸುಳಿ ಕೊಹ್ಲಿ ಕಾಲನ್ನು ಸ್ಪರ್ಶಿಸಿದ ಮೂವರು ಕ್ರಿಕೆಟ್ ಅಭಿಮಾನಿಗಳು

ವಿರಾಟ್ ಕೊಹ್ಲಿ | PC : X \ @Trend_VKohli
ಹೊಸದಿಲ್ಲಿ: ದಿಲ್ಲಿ ಹಾಗೂ ರೈಲ್ವೇಸ್ ನಡುವೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಣಜಿ ಟ್ರೋಫಿ ‘ಡಿ’ ಗುಂಪಿನ ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಮೈದಾನದೊಳಗೆ ನುಸುಳಿದ ಮೂವರು ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯವರ ಪಾದವನ್ನು ಸ್ಪರ್ಶಿಸಿರುವ ಘಟನೆ ನಡೆದಿದೆ.
3ನೇ ದಿನದಾಟವಾದ ಶನಿವಾರ ಭೋಜನ ವಿರಾಮಕ್ಕೆ ಮೊದಲು ಭದ್ರತೆ ಉಲ್ಲಂಘನೆಯ ಘಟನೆ ನಡೆದಿದೆ. ಈ ಘಟನೆಯ ನಂತರ ಪಂದ್ಯವು ಸ್ವಲ್ಪ ಹೊತ್ತು ಸ್ಥಗಿತಗೊಂಡಿತು. ಮೈದಾನದೊಳಗೆ ನುಗ್ಗಿದ ಮೂವರು ಕ್ರಿಕೆಟ್ ಅಭಿಮಾನಿಗಳು ಫೀಲ್ಡಿಂಗ್ ನಿರತ ಕೊಹ್ಲಿ ಅವರತ್ತ ಓಡಿದರು. ಆಗ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಈ ಮೂವರನ್ನು ಸುತ್ತುವರಿದು ಸ್ಟೇಡಿಯಂನಿಂದ ಹೊರಹಾಕಿದರು.
ಈ ಪಂದ್ಯದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲ ಬಾರಿಯಲ್ಲ. ಮೊದಲ ದಿನದಾಟದಲ್ಲಿ ಇನ್ನೋರ್ವ ಕ್ರಿಕೆಟ್ ಪ್ರೇಮಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನದೊಳಗೆ ನುಸುಳಿ ಕೊಹ್ಲಿ ಅವರ ಪಾದವನ್ನು ಸ್ಪರ್ಶಿಸಿದ್ದ.
ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರೂ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸುವುದನ್ನು ಮುಂದುವರಿಸಿದ್ದರು. ಕೊಹ್ಲಿ ಶುಕ್ರವಾರ 2ನೇ ದಿನದಾಟದಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಸ್ಟೇಡಿಯಮ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಭಾರೀ ಕರತಾಡನದೊಂದಿಗೆ ಸ್ವಾಗತಿಸಿದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ವೇಗದ ಬೌಲರ್ ಹಿಮಾಂಶು ಸಾಂಗ್ವಾನ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದರು. ಆದರೆ ಅವರ ಮುಂದಿನ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.