ಅಂಪೈರ್ ತೀರ್ಪಿಗೆ ಮುನ್ನವೇ ಕ್ರೀಸ್ ತೊರೆದ ಕೊಹ್ಲಿ!

ವಿರಾಟ್ ಕೊಹ್ಲಿ | PTI
ಅಹ್ಮದಾಬಾದ್: ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದ ವೇಳೆ, ತಾನು ಔಟಾಗಿದ್ದೇನೆಂದು ಅನಿಸಿದ ತಕ್ಷಣ ಅಂಪೈರ್‌ರ ತೀರ್ಪಿಗೂ ಕಾಯದೆ ಹೊರ ನಡೆಯುವ ಮೂಲಕ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ (52) ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆದಾಗ್ಯೂ, ಔಟಾಗುವ ಮುನ್ನ 50 ಎಸೆತಗಳಲ್ಲಿ ಅರ್ಧ ಶತಕವೊಂದನ್ನು ಬಾರಿಸಿದ್ದಾರೆ. ಇದು ಅವರ 73ನೇ ಏಕದಿನ ಅರ್ಧ ಶತಕವಾಗಿದೆ. ಆದರೆ, ಅರ್ಧ ಶತಕವನ್ನು ದೊಡ್ಡ ಇನಿಂಗ್ಸ್ ಆಗಿ ಬೆಳೆಸುವಲ್ಲಿ ಅವರು ವಿಫಲರಾದರು. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್‌ರ ಎಸೆತವೊಂದನ್ನು ಅವರು ವಿಕೆಟ್ ಹಿಂದುಗಡೆ ಕೀಪರ್ ಫಿಲ್ ಸಾಲ್ಟ್‌ಗೆ ಕ್ಯಾಚ್ ನೀಡಿದರು.
ಅವರು ಔಟಾದ ರೀತಿಯು ಅತ್ಯಂತ ನಾಟಕೀಯವಾಗಿತ್ತು. ಕೊಹ್ಲಿ ಔಟಾಗಿದ್ದಾರೆ ಎಂದು ಘೋಷಿಸುವಂತೆ ಕೋರಿ ಇಂಗ್ಲೆಂಡ್ ಆಟಗಾರರು ಅಂಪೈರ್‌ಗೆ ದೊಡ್ಡದಾಗಿ ಮನವಿ ಮಾಡಿದರು. ಆರಂಭದಲ್ಲಿ, ಅಂಪೈರ್ ಅದನ್ನು ನಿರ್ಲಕ್ಷಿಸಿದಂತೆ ಕಂಡುಬಂದರು. ಸಾಲ್ಟ್ ರಿವ್ಯೆಗಾಗಿ ಮನವಿ ಸಲ್ಲಿಸುವ ಇರಾದೆಯಲ್ಲಿರುವಾಗ, ಕೊಹ್ಲಿ ಕ್ರೀಸ್‌ನಿಂದ ಹೊರಹೋಗಿಯಾಗಿತ್ತು. ಚೆಂಡು ತನ್ನ ಬ್ಯಾಟ್‌ಗೆ ತಾಗಿರುವುದು ಅವರಿಗೆ ಗೊತ್ತಿತ್ತು. ಹಾಗಾಗಿ, ರಿವ್ಯೆ ತೀರ್ಪಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿ ಹೊರನಡೆದರು.
ಕೊಹ್ಲಿ ಹೊರನಡೆಯುತ್ತಿರುವುದನ್ನು ನೋಡಿದ ಅಂಪೈರ್ ಕೂಡ ತನ್ನ ಬೆರಳು ಎತ್ತಿ, ಕೊಹ್ಲಿ ಔಟ್ ಎಂಬುದಾಗಿ ಸಂಜ್ಞೆ ಮಾಡಿದರು.
ಕೊಹ್ಲಿಯನ್ನು 11 ಬಾರಿ ಔಟ್ ಮಾಡಿದ ಆದಿಲ್
ಇಂಗ್ಲೆಂಡ್‌ನ ಅನುಭವಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು 11ನೇ ಬಾರಿ ಔಟ್ ಮಾಡಿದ್ದಾರೆ. ಇದರೊಂದಿಗೆ, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಹೆಚ್ಚಾಗಿ ಕಾಡಿದ ಬೌಲರ್‌ಗಳ ಪಟ್ಟಿಗೆ ಅವರು ಸೇರ್ಪಡೆಗೊಂಡಿದ್ದಾರೆ.
ಅವರೀಗ ನ್ಯೂಝಿಲ್ಯಾಂಡ್‌ನ ಟಿಮ್ ಸೌತೀ ಮತ್ತು ಆಸ್ಟ್ರೇಲಿಯದ ಜೋಶ್ ಹ್ಯಾಝಲ್‌ವುಡ್‌ಗೆ ಸಮವಾಗಿದ್ದಾರೆ. ಅವರಿಬ್ಬರೂ ಕೊಹ್ಲಿಯನ್ನು ಕ್ರಿಕೆಟ್‌ನ ವಿವಿಧ ಮಾದರಿಗಳಲ್ಲಿ 11 ಬಾರಿ ಔಟ್ ಮಾಡಿದ್ದಾರೆ.
ರಶೀದ್ ಕೊಹ್ಲಿಯನ್ನು ಏಕದಿನ ಪಂದ್ಯಗಳಲ್ಲಿ ಐದು ಬಾರಿ, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಬಾರಿ ಮತ್ತು ಟಿ20 ಪಂದ್ಯಗಳಲ್ಲಿ ಎರಡು ಬಾರಿ ಔಟ್ ಮಾಡಿದ್ದಾರೆ.