ನಿವೃತ್ತಿ ಬಗ್ಗೆ ಸ್ಮಿತ್ ಕೊಹ್ಲಿಗೆ ಮೊದಲೇ ತಿಳಿಸಿದ್ದರೇ?

ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ |PTI
ದುಬೈ: ದುಬೈನಲ್ಲಿ ಮಂಗಳವಾರ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯವು ಸೋಲನುಭವಿಸಿದ ಬಳಿಕ, ಅದರ ತಾರಾ ಬ್ಯಾಟರ್ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಅರ್ಧ ಶತಕ ಬಾರಿಸಿದ ಸ್ಮಿತ್, ತನ್ನ ತಂಡದ ಗರಿಷ್ಠ ಸ್ಕೋರ್‌ದಾರರಾದರು. ಆದರೆ, ವಿರಾಟ್ ಕೊಹ್ಲಿಯ ಶ್ರೇಷ್ಠ ಪ್ರದರ್ಶನ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯರ ಬಿರುಸಿನ ಆಟವು ಭಾರತದ ಗೆಲುವನ್ನು ಖಾತರಿಪಡಿಸಿತು.
ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೊಳ್ಳುವ ನಿರ್ಧಾರವನ್ನು ಸ್ಮಿತ್ ಬುಧವಾರ ಜಗತ್ತಿಗೆ ತಿಳಿಸಿದರೆ, ಅವರು ತನ್ನ ನಿವೃತ್ತಿಯ ಬಗ್ಗೆ ಕೊಹ್ಲಿಗೆ ಮಂಗಳವಾರವೇ ತಿಳಿಸಿದ್ದಾರೆ ಎನ್ನುವುದು ಸಾಮಾಜಿಕ ಮಾಧ್ಯಮಗಳ ಹಲವು ಬಳಕೆದಾರರಿಗೆ ಮನವರಿಕೆಯಾಗಿದೆ.
ಸೆಮಿಫೈನಲ್ ಪಂದ್ಯದ ವೇಳೆ, ಸ್ಮಿತ್ ಮತ್ತು ಕೊಹ್ಲಿ ಕೊಂಚ ಹೊತ್ತು ಮಾತಾಡಿ ಪರಸ್ಪರ ಆಲಿಂಗಿಸಿರುವ ವೀಡಿಯೊವೊಂದು ವೈರಲ್ ಆಗಿದೆ. ಪಂದ್ಯದ ಕೊನೆಯಲ್ಲಿ ಪರಸ್ಪರ ಕೈಕುಲುಕುವಾಗ, ಇದು ಸ್ಮಿತ್‌ರ ಕೊನೆಯ ಪಂದ್ಯವೇ ಎಂಬುದಾಗಿ ಕೊಹ್ಲಿ ಕೇಳಿದ್ದಾರೆ ಹಾಗೂ ಅದಕ್ಕೆ ಹೌದು ಎಂಬುದಾಗಿ ಸ್ಮಿತ್ ಉತ್ತರಿಸಿದ್ದಾರೆ ಎಂಬುದಾಗಿ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
Virat Kohli hugging Steven Smith and Glenn Maxwell after the match. ❤️pic.twitter.com/9Uesw4bcb8
— Mufaddal Vohra (@mufaddal_vohra) March 5, 2025
ಸ್ಮಿತ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದರೂ, ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
ಗಾಯಾಳು ಪ್ಯಾಟ್ ಕಮಿನ್ಸ್‌ರ ಅನುಪಸ್ಥಿತಿಯಲ್ಲಿ, 35 ವರ್ಷದ ಸ್ಮಿತ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ತಂಡದ ನಾಯಕತ್ವ ವಹಿಸಿದ್ದರು. 50 ಓವರ್‌ಗಳ ಕ್ರಿಕೆಟ್‌ನಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತಿಗೊಳ್ಳುವುದಾಗಿ ಪಂದ್ಯದ ಬಳಿಕ ಅವರು ತನ್ನ ತಂಡದ ಸಹ ಆಟಗಾರರಿಗೆ ತಿಳಿಸಿದರು.