ಕೊಹ್ಲಿ ಈಗ ಭಾರತದ ಗರಿಷ್ಠ ಸಂಪಾದನೆಯ ಕ್ರಿಕೆಟಿಗನಲ್ಲ!

Update: 2024-11-29 15:37 GMT

ವಿರಾಟ್ ಕೊಹ್ಲಿ,  ರಿಶಭ್ ಪಂತ್ | PC : PTI 

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2025ರ ಮೆಗಾ ಹರಾಜಿನ ಬಳಿಕ ದೇಶದಲ್ಲಿ ಕ್ರಿಕೆಟ್ ಸಮೀಕರಣಗಳು ಬದಲಾಗಿವೆ. ಲಕ್ನೋ ಸೂಪರ್ ಜಯಂಟ್ಸ್ ತಂಡದಿಂದ 27 ಕೋಟಿ ರೂಪಾಯಿಗೆ ಖರೀದಿಯಾಗುವ ಮೂಲಕ ರಿಶಭ್ ಪಂತ್ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದೇ ವೇಳೆ, ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಕೂಡ ಕ್ರಮವಾಗಿ 26.75 ಕೋಟಿ ರೂಪಾಯಿ ಮತ್ತು 23.75 ಕೋಟಿ ರೂಪಾಯಿಯ ಬೃಹತ್ ಮೊತ್ತಕ್ಕೆ ಹರಾಜಾಗಿದ್ದಾರೆ.

ಜೊತೆಗೆ, ತಂಡಗಳು ಹಲವು ಆಟಗಾರರನ್ನು ಉಳಿಸಿಕೊಂಡಿವೆ. ವಿರಾಟ್ ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 21 ಕೋಟಿ ರೂಪಾಯಿ ಬೆಲೆಗೆ ಉಳಿಸಿಕೊಂಡಿದೆ. ಇದು ಭಾರತೀಯ ಆಟಗಾರರಲ್ಲೇ ಗರಿಷ್ಠ ಮೊತ್ತವಾಗಿದೆ.

ಈಗ ಐಪಿಎಲ್ ಆಟಗಾರರ ವೇತನಗಳು ಸ್ಪಷ್ಟವಾದ ಬಳಿಕ, ಕೇವಲ ಕ್ರಿಕೆಟ್‌ನಿಂದ ಗಳಿಸಿದ ಸಂಪಾದನೆಯ ಆಧಾರದಲ್ಲಿ ಹೇಳುವುದಾದರೆ ರಿಶಭ್ ಪಂತ್ ಗರಿಷ್ಠ ಗಳಿಕೆಯ ಭಾರತೀಯ ಕ್ರಿಕೆಟಿಗನಾಗಿದ್ದಾರೆ. ಅವರು ತನ್ನ ಕ್ರಿಕೆಟ್ ಆಟದ ಮೂಲಕ ವರ್ಷಕ್ಕೆ ಒಟ್ಟು 32 ಕೋಟಿ ರೂಪಾಯಿ ಸಂಪಾದಿಸುತ್ತಾರೆ. ಇದರೊಂದಿಗೆ, ಕ್ರಿಕೆಟ್‌ನಿಂದ ವರ್ಷಕ್ಕೆ 28 ಕೋಟಿ ರೂಪಾಯಿ ಗಳಿಸುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಪಂತ್ ಮತ್ತು ಕೊಹ್ಲಿ ಇಬ್ಬರೂ ಬಿಸಿಸಿಐ ಮತ್ತು ಐಪಿಎಲ್ ಗುತ್ತಿಗೆ, ಎರಡು ಮೂಲಗಳಿಂದ ಆದಾಯ ಪಡೆಯುತ್ತಾರೆ. ಪಂತ್ ಬಿಸಿಸಿಐಯ ‘ಎ’ ದರ್ಜೆಯ ಕೇಂದ್ರೀಯ ಗುತ್ತಿಗೆಯನ್ನು ಹೊಂದಿದ್ದು, ವರ್ಷಕ್ಕೆ 5 ಕೋಟಿ ರೂಪಾಯಿ ಪಡೆಯುತ್ತಾರೆ ಹಾಗೂ ಐಪಿಎಲ್‌ನಿಂದ ವರ್ಷಕ್ಕೆ 27 ಕೋಟಿ ರೂಪಾಯಿ ಸ್ವೀಕರಿಸುತ್ತಾರೆ. ಹಾಗಾಗಿ, ಅವರ ಒಟ್ಟು ಸಂಪಾದನೆ 32 ಕೋಟಿ ರೂ. ಆಗುತ್ತದೆ.

ಕೊಹ್ಲಿ ಎ ಪ್ಲಸ್ ವಿಭಾಗದಲ್ಲಿ ಬರುವುದರಿಂದ ಬಿಸಿಸಿಐಯ ಕೇಂದ್ರೀಯ ಗುತ್ತಿಗೆಗಳಿಂದ 7 ಕೋಟಿ ರೂ. ಸ್ವೀಕರಿಸುತ್ತಾರೆ. ನೂತನ ಒಪ್ಪಂದದ ಪ್ರಕಾರ, ಅವರು ಐಪಿಎಲ್‌ನಲ್ಲಿ ಆಡುವುದಕ್ಕಾಗಿ ವರ್ಷಕ್ಕೆ 21 ಕೋಟಿ ರೂಪಾಯಿ ಮೊತ್ತವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಪಡೆಯುತ್ತಾರೆ. ಅವರು ವರ್ಷಕ್ಕೆ ಒಟ್ಟು 28 ಕೋಟಿ ರೂ. ಪಡೆಯುತ್ತಾರೆ.

ಮುಂದಿನ ವರ್ಷದ ಮಾರ್ಚ್‌ನಲ್ಲಿ ನೂತನ ಬಿಸಿಸಿಐ ಗುತ್ತಿಗೆಗಳು ಘೋಷಣೆಯಾದಾಗ ಪಂತ್‌ರ ಸಂಪಾದನೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಅವರು ಭಾರತೀಯ ತಂಡದ ಯೋಜನೆಯ ಪ್ರಮುಖ ಭಾಗವಾಗಿರುವುದರಿಂದ ಅವರು ಎ ಪ್ಲಸ್ ಶ್ರೇಣಿಗೆ ಭಡ್ತಿಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇದು ಸಂಭವಿಸಿದರೆ, ಅವರ ಸಂಪಾದನೆ ಮತ್ತಷ್ಟು ಹೆಚ್ಚುತ್ತದೆ ಹಾಗೂ ಕೊಹ್ಲಿಯಿಂದ ಹೆಚ್ಚಿನ ಅಂತರದ ಮುನ್ನಡೆ ಹೊಂದುತ್ತಾರೆ.

ಕೊಹ್ಲಿ ಈಗ ಭಾರತೀಯ ಟಿ20 ತಂಡದ ಸದಸ್ಯರಲ್ಲ. ಹಾಗಾಗಿ, ಅವರನ್ನು ಆಟಗಾರರ ‘ಎ’ ಶ್ರೇಣಿಗೆ ಇಳಿಸುವ ಸಾಧ್ಯತೆಯೂ ಇದೆ. ಈ ಬದಲಾವಣೆ ನಡೆದರೆ ಅವರ ವೇತನ ಕಡಿಮೆಯಾಗುತ್ತದೆ.

ಹರಾಜಿನಲ್ಲಿ ಎರಡು ಮತ್ತು ಮೂರನೇ ಗರಿಷ್ಠ ಬೆಲೆಗೆ ಮಾರಾಟವಾಗಿರುವ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಸದ್ಯಕ್ಕೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಗಳನ್ನು ಹೊಂದಿಲ್ಲ. ಆದರೆ, ಶ್ರೇಯಸ್ ಭಾರತೀಯ ತಂಡಕ್ಕೆ ಮರಳಿದರೆ ಕೇಂದ್ರೀಯ ಗುತ್ತಿಗೆಯನ್ನು ಪಡೆಯುವ ಅವಕಾಶ ಅವರಿಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News