ಪ್ರಶಸ್ತಿಗಳ ವಿಶ್ವದಾಖಲೆ ಮುರಿದ ಲಿಯೊನೆಲ್ ಮೆಸ್ಸಿ

Update: 2024-07-15 16:48 GMT

ಲಿಯೊನೆಲ್ ಮೆಸ್ಸಿ 

ಹೊಸದಿಲ್ಲಿ : ಫೈನಲ್‌ನಲ್ಲಿ ಕೊಲಂಬಿಯವನ್ನು 1-0 ಅಂತರದಿಂದ ಸೋಲಿಸಿ ಅರ್ಜೆಂಟೀನವು ರವಿವಾರ ಕೊಪಾ ಅಮೆರಿಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ತನ್ನ ಸತತ ಮೂರನೇ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅರ್ಜೆಂಟೀನದ ಗೆಲುವಿನ ಗೋಲನ್ನು ಲೌಟಾರೊ ಮಾರ್ಟಿನೇಝ್ ಹೆಚ್ಚುವರಿ ಸಮಯದಲ್ಲಿ ಬಾರಿಸಿದರು.

ಇದು ಮೆಸ್ಸಿಯ ಕ್ರೀಡಾ ಜೀವನದ 45ನೇ ಟ್ರೋಫಿಯಾಗಿದೆ. ಈ ಮೂಲಕ ಅವರು ಬ್ರೆಝಿಲ್‌ನ ಡಾನಿ ಆಲ್ವಿಸ್‌ರನ್ನು ಹಿಂದಿಕ್ಕಿ ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದ ಫುಟ್ಬಾಲ್ ಆಟಗಾರನಾದರು.

ಮೆಸ್ಸಿ ಅರ್ಜೆಂಟೀನದ ಪರವಾಗಿ ಕೇವಲ ಮೂರು ವರ್ಷಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 2022ರಲ್ಲಿ ಫೀಫಾ ವಿಶ್ವಕಪ್ ಗೆದ್ದಿದ್ದಾರೆ. ಅವರು ತನ್ನ ಕ್ಲಬ್ ಫುಟ್ಬಾಲ್ ಅವಧಿಯಲ್ಲಿ 39 ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಈ ಪೈಕಿ ಹೆಚ್ಚಿನ ಪ್ರಶಸ್ತಿಗಳನ್ನು ಅವರು ಬಾರ್ಸಿಲೋನ ಕ್ಲಬ್ ಪರವಾಗಿ ಗೆದ್ದಿದ್ದಾರೆ.

ಅವರು ಒಟ್ಟು 12 ಲೀಗ್ ಪ್ರಶಸ್ತಿಗಳು (10 ಬಾರ್ಸಿಲೋನದ ಪರವಾಗಿ ಮತ್ತು ಎರಡು ಪಿಎಸ್‌ಜಿ ಪರವಾಗಿ), ನಾಲ್ಕು ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಟ್ರೋಫಿಗಳು (ಎಲ್ಲವೂ ಬಾರ್ಸಿಲೋನ ಪರವಾಗಿ) ಮತ್ತು 17 ದೇಶಿ ಕಪ್‌ಗಳನ್ನು (15 ಬಾರ್ಸಿಲೋನ ಪರವಾಗಿ, ಒಂದು ಪಿಎಸ್‌ಐ ಪರವಾಗಿ ಮತ್ತು ಒಂದು ಎಮ್‌ಎಲ್‌ಎಸ್ ತಂಡ ಇಂಟರ್ ಮಿಲಾನ್ ಪರವಾಗಿ) ಗೆದ್ದಿದ್ದಾರೆ.

ಅವರು ಯುಇಎಫ್‌ಎ ಸೂಪರ್ ಕಪ್‌ಗಳು ಮತ್ತು ಫಿಫಾ ಕ್ಲಬ್ ವಿಶ್ವಕಪ್‌ಗಳನ್ನು ತಲಾ ಮೂರು ಗೆದ್ದಿದ್ದಾರೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ, ಅವರು 2005ರಲ್ಲಿ ಅರ್ಜೆಂಟೀನದ ಪರವಾಗಿ ಅಂಡರ್-17 ವಿಶ್ವಕಪ್ ಮತ್ತು 2008ರ ಒಲಿಂಪಿಕ್ ಗೇಮ್ಸ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅವರು ವೈಯಕ್ತಿಕವಾಗಿ, ಅತಿ ಹೆಚ್ಚು ಸಂಖ್ಯೆಯ ಬಾಲನ್ ಡಿ ಓರ್ (8 ಬಾರಿ) ಮತ್ತು ಆರು ಯುರೋಪಿಯನ್ ಗೋಲ್ಡನ್ ಬೂಟ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಅವರು, ಈವರೆಗೆ 1068 ಪಂದ್ಯಗಳಲ್ಲಿ 838 ಗೋಲುಗಳನ್ನು ಬಾರಿಸಿದ್ದಾರೆ ಮತ್ತು 374 ಬಾರಿ ಗೋಲು ಗಳಿಕೆಗೆ ನೆರವು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News