ಅಶುತೋಶ್ ಹೋರಾಟ ವ್ಯರ್ಥ: ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 9 ರನ್ ಜಯ

Update: 2024-04-18 18:21 GMT

PC : X/@IPL

ಮುಲ್ಲನ್‌ಪುರ(ಚಂಡಿಗಡ): ಎಂಟನೇ ಕ್ರಮಾಂಕದ ಬ್ಯಾಟರ್ ಅಶುತೋಶ್ ಶರ್ಮಾ(61 ರನ್, 28 ಎಸೆತ, 2 ಬೌಂಡರಿ, 7 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್ ಹೊರತಾಗಿಯೂ ಜಸ್‌ಪ್ರೀತ್ ಬುಮ್ರಾ (3-21) ಹಾಗೂ ಜೆರಾಲ್ಡ್ ಕೊಯೆಟ್ಝಿ(3-32) ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಗುರುವಾರ ನಡೆದ 33ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ರನ್ ಅಂತರದಿಂದ ಸೋಲುಂಡಿದೆ.

ಗೆಲ್ಲಲು 193 ರನ್ ಗುರಿ ಬೆನ್ನಟ್ಟಿದ ಪಂಜಾಬ್ 19.1 ಓವರ್‌ಗಳಲ್ಲಿ 183 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ಅಶುತೋಶ್ ಶರ್ಮಾ ಏಕಾಂಗಿ ಹೋರಾಟ ನೀಡಿದರು. ಶಶಾಂಕ್ ಸಿಂಗ್ 41 ರನ್, ಹರ್‌ಪ್ರೀತ್ ಬ್ರಾತ್ 21 ರನ್ ಗಳಿಸಿದರು.

ಮುಂಬೈ ಬೌಲಿಂಗ್ ವಿಭಾಗದಲ್ಲಿ ಬುಮ್ರಾ(3-21) ಹಾಗೂ ಕೊಯೆಟ್ಜಿ(3-32) ತಲಾ 3 ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಪಂಜಾಬ್ ತಂಡ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಮುಂಬೈ ತಂಡ ಅಗ್ರ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ (78 ರನ್, 53 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು.

ಮುಂಬೈ ಪರ ಸೂರ್ಯ ಅವರಲ್ಲದೆ ನಾಯಕ ರೋಹಿತ್ ಶರ್ಮಾ(36 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ತಿಲಕ್ ವರ್ಮಾ(ಔಟಾಗದೆ 34 ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್)ಕೂಡ ಮುಂಬೈ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

ಪಂಜಾಬ್ ಕಿಂಗ್ಸ್ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್(3-31) ಯಶಸ್ವಿ ಪ್ರದರ್ಶನ ನೀಡಿದರು. ನಾಯಕ ಸ್ಯಾಮ್ ಕರ‌್ರನ್(2-41) ಎರಡು ವಿಕೆಟ್ ಪಡೆದರು.

ಕೊನೆಯ ಓವರ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಮುಂಬೈ ತಂಡವನ್ನು 200 ರನ್‌ನೊಳಗೆ ಕಟ್ಟಿಹಾಕಿದರು. ಮುಂಬೈ 20ನೇ ಓವರ್‌ನಲಿ ಕೇವಲ 7 ರನ್ ಗಳಿಸಿದ್ದರೂ ಒಟ್ಟು 192 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಐಪಿಎಲ್ ಟಿ-20 ಲೀಗ್‌ನಲ್ಲಿ ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ಮುಂಬೈ ತಂಡ ಮೊದಲ 6 ಓವರ್‌ಗಳ ಪವರ್ ಪ್ಲೇ ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಮಧ್ಯಮ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಸ್ಯಾಮ್ ಕರನ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಕರ‌್ರನ್ ಅವರು ರೋಹಿತ್ ಹಾಗೂ ಸೂರ್ಯಕುಮಾರ್ ಇನಿಂಗ್ಸ್‌ಗೆ ತೆರೆ ಎಳೆದರು.

ಮುಂಬೈ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಸೂರ್ಯಕುಮಾರ್(78 ರನ್, 53 ಎಸೆತ, 7 ಬೌಂಡರಿ, 3 ಸಿಕ್ಸರ್)ನಾಯಕ ರೋಹಿತ್‌ರೊಂದಿಗೆ 2ನೇ ವಿಕೆಟ್‌ಗೆ 81 ರನ್ ಜೊತೆಯಾಟ ನಡೆಸಿದರು. ರೋಹಿತ್ ಔಟಾದ ನಂತರ ತಿಲಕ್ ವರ್ಮಾ ಜೊತೆಗೆ 3ನೇ ವಿಕೆಟ್‌ಗೆ ಇನ್ನೂ 49 ರನ್ ಸೇರಿಸಿದರು.

ಶಿಖರ್ ಧವನ್ ಇನ್ನಷ್ಟೇ ಭುಜನೋವಿನಿಂದ ಚೇತರಿಸಿಕೊಳ್ಳಬೇಕಾಗಿದ್ದು, ಧವನ್ ಅನುಪಸ್ಥಿತಿಯಲ್ಲಿ ಸ್ಯಾಮ್ ಕರ‌್ರನ್ ಪಂಜಾಬ್ ಕಿಂಗ್ಸ್ ನೇತೃತ್ವವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News