ಭಾರತ-ಇಂಗ್ಲೆಂಡ್ ಟೆಸ್ಟ್ ನಲ್ಲಿ ಗರಿಷ್ಠ ರನ್: ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಜೋ ರೂಟ್
ಹೊಸದಿಲ್ಲಿ: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿರುವ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಹೈದರಾಬಾದಿನ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಮ್ನಲ್ಲಿ ಗುರುವಾರ ಆರಂಭವಾದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ರೂಟ್ ಈ ಮೈಲಿಗಲ್ಲು ದಾಖಲಿಸಿದರು.
ತೆಂಡುಲ್ಕರ್ ದಾಖಲೆಯನ್ನು ಮುರಿಯಲು ರೂಟ್ ಗೆ ಇಂದು ಕೇವಲ 10 ರನ್ ಅಗತ್ಯವಿತ್ತು. ರೂಟ್ 21ನೇ ಓವರ್ ನಲ್ಲಿ ಈ ಮೈಲಿಗಲ್ಲು ತಲುಪಿದರು. ತೆಂಡುಲ್ಕರ್ ಇಂಗ್ಲೆಂಡ್ ವಿರುದ್ಧ ಆಡಿರುವ 32 ಪಂದ್ಯಗಳಲ್ಲಿ ಒಟ್ಟು 2,535 ರನ್ ಗಳಿಸಿದ್ದರು.
ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ಇಂಗ್ಲೆಂಡ್ ಮಾಜಿ ನಾಯಕ ರೂಟ್, ತೆಂಡುಲ್ಕರ್ ದಾಖಲೆ ಮುರಿದರು. ರೂಟ್ 48 ಪಂದ್ಯಗಳಲ್ಲಿ 2,555 ರನ್ ಗಳಿಸಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡು ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದರು.
48 ಟೆಸ್ಟ್ ಪಂದ್ಯಗಳಲ್ಲಿ 4,016 ರನ್ ಗಳಿಸಿದ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ 4 ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೂಟ್ 60 ಎಸೆತಗಳಲ್ಲಿ 29 ರನ್ ಗಳಿಸಿದರು. ರವೀಂದ್ರ ಜಡೇಜ ಬೌಲಿಂಗ್ನಲ್ಲಿ ಸ್ವೀಪ್ ಮಾಡಲು ಯತ್ನಿಸಿ ಶಾರ್ಟ್ ಫೈನ್-ಲೆಗ್ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿದರು.
ಈ ಮಹತ್ವದ ಸಾಧನೆಯ ಮೂಲಕ ರೂಟ್ ಅವರು ಆಧುನಿಕ ಕ್ರಿಕೆಟಿನ ಓರ್ವ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಲ್ಲದೆ ತನ್ನ ವೃತ್ತಿಜೀವನದಲ್ಲಿ ಮತ್ತೊಂದು ಅಧ್ಯಾಯ ಸೇರಿಸಿದರು.