ಪಾಕ್ ವಿರುದ್ಧದ ಟಿ20 ಸರಣಿಗೆ ಕಿವೀಸ್ ನಾಯಕನಾಗಿ ಮೈಕೆಲ್ ಬ್ರೇಸ್ವೆಲ್
ಕ್ರೈಸ್ಟ್ ಚರ್ಚ್: ಹೆಚ್ಚಿನ ಪ್ರಮುಖ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ, ಈ ತಿಂಗಳ ಉತ್ತರಾರ್ಧದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಆ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನ್ಯೂಝಿಲ್ಯಾಂಡ್ ತಂಡದ ನಾಯಕನಾಗಿ ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ರನ್ನು ನೇಮಿಸಲಾಗಿದೆ.
ಟ್ರೆಂಟ್ ಬೋಲ್ಟ್, ಡೇವನ್ ಕಾನ್ವೇ, ಲಾಕೀ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ ನರ್ ಮತ್ತು ಕೇನ್ ವಿಲಿಯಮ್ಸನ್ ಪ್ರಸಕ್ತ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಅದೇ ವೇಳೆ, ಕಳೆದ ಟಿ20 ವಿಶ್ವಕಪ್ ಬಳಿಕ, ತಂಡದ ಗರಿಷ್ಠ ಟಿ20 ವಿಕೆಟ್ ಗಳಿಕೆದಾರರಾಗಿರುವ ಟಿಮ್ ಸೌತೀ ವಿವಿಧ ಮಾದರಿಗಳ ಕ್ರಿಕೆಟ್ ನಲ್ಲಿ ವ್ಯಸ್ತರಾಗಿರುವುದರಿಂದ ಅವರನ್ನು ತಂಡಕ್ಕೆ ಪರಿಗಣಿಸಲಾಗಿಲ್ಲ.
ಗಾಯಗೊಂಡು ಕಳೆದ ವರ್ಷದ ಮಾರ್ಚ್ ನಿಂದ ಮೂಲೆಗುಂಪಾಗಿದ್ದ 33 ವರ್ಷದ ಬ್ರೇಸ್ವೆಲ್, ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದು ಕೇವಲ ಎರಡು ವರ್ಷಗಳ ಹಿಂದೆ. ಅವರು ಈವರೆಗೆ ಈ ಮಾದರಿಯ ಕ್ರಿಕೆಟ್ ನಲ್ಲಿ ಕೇವಲ 16 ಪಂದ್ಯಗಳನ್ನು ಅಡಿದ್ದಾರೆ. ಅವರು ಮೊದಲ ಬಾರಿಗೆ ತಂಡದ ನಾಯಕತ್ವವನ್ನು ವಹಿಸುತ್ತಿದ್ದಾರೆ.
ಬ್ರೇಸ್ವೆಲ್ 16 ಟಿ20 ಪಂದ್ಯಗಳಿಂದ 113 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧ ಶತಕವಿದೆ. ಅವರು ಎಂಟು ಟೆಸ್ಟ್ ಗಳು ಮತ್ತು 19 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯವು ರಾವಲ್ಪಿಂಡಿಯಲ್ಲಿ ಎಪ್ರಿಲ್ 18ರಂದು ನಡೆಯಲಿದೆ.
ನ್ಯೂಝಿಲ್ಯಾಂಡ್ ತಂಡ: ಮೈಕೆಲ್ ಬ್ರೇಸ್ವೆಲ್ (ನಾಯಕ), ಫಿನ್ ಅಲನ್, ಮಾರ್ಕ್ ಚಾಪ್ಮನ್, ಜೋಶ್ ಕ್ಲಾರ್ಕ್ಸನ್, ಜಾಕೋಬ್ ಡಫಿ, ಡೀನ್ ಫಾಕ್ಸ್ಕ್ರಾಫ್ಟ್, ಬೆನ್ ಲಿಸ್ಟರ್, ಕೋಲ್ ಮೆಕೋಚೀ, ಆ್ಯಡಮ್ ಮಿಲ್ನ್, ಜಿಮ್ಮಿ ನೀಶಮ್, ವಿಲ್ ಒ’ರೂರ್ಕ್, ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ಟಿಮ್ ಸೇಫರ್ಟ್ (ವಿಕೆಟ್ಕೀಪರ್), ಇಶ್ ಸೋಧಿ.