ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿರಿಸಿದ ಕುರಿತು ಕೊನೆಗೂ ಮೌನ ಮುರಿದ ಮಿಚೆಲ್ ಮಾರ್ಷ್‌

Update: 2023-12-01 10:30 GMT

ಸಿಡ್ನಿ: ವಿಶ್ವಕಪ್ ಫೈನಲ್ ಪಂದ್ಯ ಮುಕ್ತಾಯಗೊಂಡ ನಂತರದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವಿಶ್ವಕಪ್ ಟ್ರೋಫಿಯ ಮೇಲೆ ತಮ್ಮ ಪಾದಗಳನ್ನಿಟ್ಟಿದ್ದಾರೆ ಎಂಬ ಕಾರಣಕ್ಕೆ ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ ವಿವಾದಕ್ಕೆ ಗುರಿಯಾಗಿದ್ದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಪರಾಭವಗೊಳಿಸಿದ್ದ ಆಸ್ಟ್ರೇಲಿಯಾ ತಂಡವು ಆರನೆಯ ಬಾರಿಗೆ ವಿಶ್ವಕಪ್ ಜಯಿಸಿತ್ತು. ಇದರ ಬೆನ್ನಿಗೇ ಫೋಟೊವೊಂದು ವೈರಲ್ ಆಗಿ, ಮಿಚೆಲ್ ಮಾರ್ಷ್ ತಮ್ಮ ಪಾದವನ್ನು ವಿಶ್ವಕಪ್ ಟ್ರೋಫಿಯ ಮೇಲಿಟ್ಟಿರುವುದು ಅದರಲ್ಲಿ ಕಂಡು ಬಂದಿತ್ತು. ಇದಕ್ಕಾಗಿ ಅವರು ಟೀಕೆಗೆ ಗುರಿಯಾಗಿದ್ದರು.

12 ದಿನಗಳ ನಂತರ ಈ ವಿವಾದದ ಕುರಿತು ಮಿಚೆಲ್ ಮಾರ್ಷ್ ತಮ್ಮ ಮೌನ ಮುರಿದಿದ್ದಾರೆ.

ಭಾರತದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ತಮ್ಮ ಸಂಭ್ರಮಾಚರಣೆಯು ಅಗೌರವ ತೋರಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು 32 ವರ್ಷದ ಮಿಚೆಲ್ ಮಾರ್ಷ್ ಹೇಳಿದ್ದಾರೆ.

“ಆ ಫೊಟೋದಲ್ಲಿ ಖಂಡಿತ ಯಾವುದೇ ಅಗೌರವದ ಅರ್ಥವಿಲ್ಲ. ಆ ಸಂದರ್ಭದಲ್ಲಿ ನಾನು ಹೆಚ್ಚು ಯೋಚಿಸಿರಲಿಲ್ಲ ಹಾಗೂ ಎಲ್ಲರೂ ಆ ಫೊಟೋ ವೈರಲ್ ಆಗಿದೆ ಎಂದು ಹೇಳಿದಾಗಲೂ ನಾನು ಹೆಚ್ಚು ಸಾಮಾಜಿಕ ಮಾಧ್ಯಮಗಳನ್ನು ನೋಡಲಿಲ್ಲ. ಅದರಲ್ಲಿ ಅಂತಹುದೇನೂ ಇರಲಿಲ್ಲ” ಎಂದು ಅವರು SEN ಸುದ್ದಿ ಸಂಸ್ಥೆಗೆ ಸ್ಪಷ್ಟೀಕರಣ ನೀಡಿದ್ದಾರೆ.

ವಿಶ್ವಕಪ್ ಕ್ರೀಡಾಕೂಟದಲ್ಲಿ 441 ರನ್ ಕಲೆ ಹಾಕಿದ್ದ ಆಸ್ಟ್ರೇಲಿಯ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್, ಫೈನಲ್ ಪಂದ್ಯದ ನಂತರದ ತಮ್ಮ ವರ್ತನೆಯಿಂದ ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News