ಎಂ.ಎಸ್.ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು : ಕಿಡಿಕಾರಿದ ಯೋಗರಾಜ್ ಸಿಂಗ್

Update: 2024-09-01 18:01 GMT

ಯುವರಾಜ್ ಸಿಂಗ್ ,  ಮಹೇಂದ್ರ ಸಿಂಗ್ ಧೋನಿ | NDTV 

ಹೊಸದಿಲ್ಲಿ : 2011ರ ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ. ಯೋಗರಾಜ್ ಸಿಂಗ್ ಅವರು ಪದೇ ಪದೇ ಸಾರ್ವಜನಿಕ ವೇದಿಕೆಗಳಲ್ಲಿ ಧೋನಿ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದರು ಹಾಗೂ ತಮ್ಮ ಪುತ್ರ ಯುವರಾಜ್ ಸಿಂಗ್ ವೃತ್ತಿಜೀವನ ನಾಶವಾಗಲು ಅವರೇ ಕಾರಣ ಎಂದು ಆರೋಪಿಸಿದ್ದರು.

ಆದರೆ, ಯುವರಾಜ್ ಸಿಂಗ್ ಮಾತ್ರ ತಮ್ಮ ಮಾಜಿ ನಾಯಕ ಮತ್ತು ಸಹ ಆಟಗಾರ ಮಹೇಂದ್ರ ಸಿಂಗ್ ಧೋನಿ ಕುರಿತು ಸಕಾರಾತ್ಮಕ ಮಾತುಗಳನ್ನೇ ಆಡಿದ್ದರು. ಧೋನಿ ನಾಯಕತ್ವದಲ್ಲಿ 2007ರಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಭಾರತ ತಂಡ ಜಯಿಸುವಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಧೋನಿ ಅವರು ಭಾರತ ತಂಡದ ನಾಯಕರಾಗಿದ್ದಾಗ, ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದ ಉತ್ಕರ್ಷದಲ್ಲಿದ್ದರು.

Zee Switch ಯೂಟ್ಯೂಬ್ ವಾಹಿನಿಗೆ ನೀಡಿರು ಸಂದರ್ಶನದಲ್ಲಿ ಯುವರಾಜ್ ಸಿಂಗ್ ವೃತ್ತಿ ಜೀವನ ಹಾಳಾಗಲು ಧೋನಿಯೇ ಕಾರಣ ಎಂದು ಮತ್ತೊಮ್ಮೆ ದೂಷಿಸಿರುವ ಯೋಗರಾಜ್ ಸಿಂಗ್, ಅದಕ್ಕಾಗಿ ನಾನೆಂದಿಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

“ನಾನು ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆತ ಬಹು ದೊಡ್ಡ ಆಟಗಾರ. ಆದರೆ, ಆತ ನನ್ನ ಪುತ್ರನ ವಿರುದ್ಧ ಏನೆಲ್ಲ ಮಾಡಿದ್ದಾರೆ ಅದೀಗ ಹೊರ ಬರುತ್ತಿದೆ. ಅದನ್ನು ಜೀವನದಲ್ಲೆಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ಎರಡು ವಿಷಯಗಳನ್ನು ಜೀವನದಲ್ಲೆಂದೂ ಮಾಡಿಲ್ಲ – ಮೊದಲನೆಯದು, ನನಗೆ ಕೆಟ್ಟದು ಮಾಡಿದ ಯಾರನ್ನೂ ನಾನು ಎಂದಿಗೂ ಕ್ಷಮಿಸಿಲ್ಲ. ಎರಡನೆಯದು, ಅಂಥವರನ್ನು ನನ್ನ ಜೀವನದೆಲ್ಲಿ ಎಂದಿಗೂ ಆಲಂಗಿಸಿಲ್ಲ. ಅವರು ನನ್ನ ಕುಟುಂಬದ ಸದಸ್ಯರೇ ಆಗಿರಲಿ ಅಥವಾ ಮಕ್ಕಳಾಗಿರಲಿ” ಎಂದು Zee Switch ಯೂಟ್ಯೂಬ್ ವಾಹಿನಿಯೊಂದಿಗಿನ ಮಾತುಕತೆಯಲ್ಲಿ ಯೋಗರಾಜ್ ಸಿಂಗ್ ಹೇಳಿದ್ದಾರೆ.

ಇನ್ನೂ ಮೂರರಿಂದ ನಾಲ್ಕು ವರ್ಷಗಳ ಕಾಲ ಹೆಚ್ಚು ಆಟವಾಡಬಹುದಾಗಿದ್ದ ನನ್ನ ಪುತ್ರನ ವೃತ್ತಿ ಜೀವನವನ್ನು ಆ ಮನುಷ್ಯ (ಎಂ.ಎಸ್.ಧೋನಿ) ಹಾಳುಗೆಡವಿದ. ಯುವರಾಜ್ ಸಿಂಗ್ ನಂತಹ ಪುತ್ರನಿಗೆ ಜನ್ಮ ನೀಡುವಂತೆ ಎಲ್ಲರಿಗೂ ಸವಾಲು ಎಸೆಯುತ್ತೇನೆ. ಈ ಹಿಂದೆ ಗೌತಮ್ ಗಂಭೀರ್ ಹಾಗೂ ವಿರೇಂದ್ರ ಸೆಹ್ವಾಗ್ ಕೂಡಾ ಯುವರಾಜ್ ಸಿಂಗ್ ನಂಥ ಮತ್ತೊಬ್ಬ ಆಟಗಾರ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕ್ಯಾನ್ಸರ್ ನೊಂದಿಗೆ ಹೋರಾಡುತ್ತಾ ಭಾರತ ತಂಡದ ಪರ ಆಟವಾಡಿ, ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ನನ್ನ ಪುತ್ರ ಯುವರಾಜ್ ಸಿಂಗ್ ನಿಗೆ ದೇಶವು ಭಾರತ ರತ್ನ ಪುರಸ್ಕಾರವನ್ನು ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

2000-2017ರವರೆಗೆ 402 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್, 11,178 ರನ್ ಗಳನ್ನು ಗಳಿಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಅವರು ಒಟ್ಟು 17 ಶತಕ ಹಾಗೂ 71 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವರು 2002ರ ಚಾಂಪಿಯನ್ಸ್ ಟ್ರೋಫಿ (ಶ್ರೀಲಂಕಾ ಜಂಟಿ ವಿಜೇತ ತಂಡ), ಐಸಿಸಿ ಟಿ20 ವಿಶ್ವಕಪ್ 2007 ಹಾಗೂ ಐಸಿಸಿ ಕ್ರಿಕೆಟ್ ವಿಶ್ವಕಪ್ 2011 ಗೆದ್ದ ಭಾರತ ತಂಡದ ಭಾಗವಾಗಿದ್ದರು.

ಜೂನ್ 2017ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವರಾಜ್ ಸಿಂಗ್, 2019ರಲ್ಲಿ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ತಮ್ಮ ನಿವೃತ್ತಿ ಘೋಷಿಸಿದ್ದರು.

ಸೌಜನ್ಯ: hidustantimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News