ಎಂ.ಎಸ್. ಧೋನಿ ಸಲಹೆ ನೆರವಿಗೆ ಬಂತು: ರಿಂಕು ಸಿಂಗ್

Update: 2023-11-24 16:01 GMT

ಎಂ.ಎಸ್. ಧೋನಿ,ರಿಂಕು ಸಿಂಗ್ |  X



ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ವಿಶಾಖಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದ ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಮಧ್ಯಮ ಸರದಿಯ ಬ್ಯಾಟರ್ ರಿಂಕು ಸಿಂಗ್ ಯಾವುದೇ ಒತ್ತಡಕ್ಕೆ ಒಳಗಾಗದೆ ಶಾಂತಚಿತ್ತದಿಂದ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದರು. ಭಾರತವು 8 ವಿಕೆಟ್ ಗಳನ್ನು ಕಳೆದುಕೊಂಡಿದ್ದರೂ ಆಸೀಸ್ ವಿರುದ್ಧ ಗರಿಷ್ಠ ಟಿ-20 ಸ್ಕೋರನ್ನು ಪಂದ್ಯದ ಕೊನೆಯ ಎಸೆತದಲ್ಲಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.

ಐಪಿಎಲ್ ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ರಿಂಕು ಸಿಂಗ್, ಆಸೀಸ್ ವಿರುದ್ಧ 209 ರನ್ ಚೇಸ್ ವೇಳೆ ಭೀತಿಗೊಳಗಾಗದೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತದ ಗೆಲುವಿಗೆ 1 ರನ್ ಅಗತ್ಯವಿದ್ದಾಗ ಸೀನ್ ಅಬಾಟ್ ಎಸೆದ ಎಸೆತವನ್ನು ರಿಂಕು ಸಿಂಗ್ ಸಿಕ್ಸರ್ ಗೆ ಅಟ್ಟಿದ್ದರು. ಆದರೆ ಅಬಾಟ್ ನೋ-ಬಾಲ್ ಎಸೆದ ಕಾರಣ ರಿಂಕು ಸಿಕ್ಸರ್ ನನ್ನು ಪರಿಗಣಿಸಲಾಗಿಲ್ಲ. ರಿಂಕು 14 ಎಸೆತಗಳಲ್ಲಿ ಔಟಾಗದೆ 22 ರನ್ ಗಳಿಸಿದರು.

ಪಂದ್ಯದ ನಂತರ ಮಾತನಾಡಿದ ರಿಂಕು ಸಿಂಗ್, ಪಂದ್ಯದ ಪರಿಸ್ಥಿತಿ ಉದ್ವಿಗ್ನತೆ ಪಡೆದಾಗಲೆಲ್ಲಾ ಹೇಗೆ ಆಡಬೇಕೆಂಬ ಮಾಜಿ ನಾಯಕ ಎಂ.ಎಸ್. ಧೋನಿಯವರ ಸಲಹೆ ನನ್ನ ನೆರವಿಗೆ ಬಂತು ಎಂದರು.

ನಾನು ಒಮ್ಮೆ ಮಾಹಿ ಭಾಯ್(ಎಂಎಸ್ ಧೋನಿ)ಅವರೊಂದಿಗೆ ಮಾತನಾಡುತ್ತಿದ್ದಾಗ, ಚೇಸಿಂಗ್ನಲ್ಲಿ ಅಂತಿಮ ಓವರ್ನಲ್ಲಿ ನಿಮ್ಮ ಆಲೋಚನೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಕೇಳಿದ್ದೆ. ಆಗ ಅವರು ಸಾಧ್ಯವಾದಷ್ಟು ಶಾಂತವಾಗಿ ಉಳಿಯಲು ಹಾಗೂ ಚೆಂಡನ್ನು ನೇರವಾಗಿ ಹೊಡೆಯಲು ಪ್ರಯತ್ನಿಸಿ ಎಂದು ನನಗೆ ಸಲಹೆ ನೀಡಿದ್ದರು. ನಾನು ಅವರ ಸಲಹೆಯನ್ನು ಅನುಸರಿಸುತ್ತಿದ್ದೇನೆ. ಶಾಂತವಾಗಿರಲು ಪ್ರಯತ್ನಿಸುತ್ತೇನೆ. ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಇದು ನನಗೆ ತುಂಬಾ ನೆರವಿಗೆ ಬಂತು ಎಂದು ರಿಂಕು ಸಿಂಗ್ ಹೇಳಿದರು.

ನಾಯಕ ಸೂರ್ಯಕುಮಾರ್(80 ರನ್) ಹಾಗೂ ಇಶಾನ್ ಕಿಶನ್(58 ರನ್) ಅರ್ಧಶತಕಗಳು ಹಾಗೂ ರಿಂಕು ಸಿಂಗ್ ಉತ್ತಮ ಫಿನಿಶಿಂಗ್ ನೆರವಿನಿಂದ ಭಾರತವು ಆಸ್ಟ್ರೇಲಿಯ ವಿರುದ್ಧ 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತ್ತು.

ಸರಣಿಯ 2ನೇ ಪಂದ್ಯವು ರವಿವಾರ ತಿರುವನಂತಪುರದಲ್ಲಿ ಆಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News