ನನ್ನ ಹೆಸರಿನ ನಕಲಿ ಫೇಸ್ ಬುಕ್ ಖಾತೆಗೆ ಮೋಸ ಹೋಗದಂತೆ ನೌಶಾದ್ ಖಾನ್ ವಿನಂತಿ
ಮುಂಬೈ: ನನ್ನ ಹೆಸರಿನಲ್ಲಿ ಬಹಳಷ್ಟು ಜನರು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ. ನೆಟ್ ಬೌಲರ್ ಗಳಾಗಿ ಐಪಿಎಲ್ ಗೆ ಪ್ರವೇಶ ಪಡೆಯುವ ನೆಪದಲ್ಲಿ,ರಾಜ್ಯ, ಅಕಾಡಮಿ ಆಯ್ಕೆಗಾಗಿ ಈ ಖಾತೆಯ ಮೂಲಕ ಮಕ್ಕಳಿಂದ ಹಣ ಕೇಳಲಾಗುತ್ತಿದೆ ಎಂದು ಭಾರತೀಯ ಕ್ರಿಕೆಟಿಗಸರ್ಫರಾಝ್ ಖಾನ್ ಅವರ ತಂದೆ ನೌಶಾದ್ ಹೇಳಿದ್ದಾರೆ.
ನಕಲಿ ಖಾತೆಗಳ ಮೂಲಕ ಮಹತ್ವಾಕಾಂಕ್ಷಿ ಕ್ರಿಕೆಟಿಗರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ವಂಚನೆಗಳನ್ನು ನಡೆಸುತ್ತಿರುವ ಇಂತಹ ವ್ಯಕ್ತಿಗಳನ್ನು ನಂಬದೆ ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ. ನಾನು ಯಾವುದೇ ಐಪಿಎಲ್ ತಂಡದೊಂದಿಗೆ ನಂಟು ಹೊಂದಿಲ್ಲ, ನಾನು ಎಲ್ಲಿಯೂ ಕೋಚಿಂಗ್ ನೀಡುತ್ತಿಲ್ಲ, ದಯವಿಟ್ಟು ಇಂತಹವರನ್ನು ನಂಬಬೇಡಿ, ಧನ್ಯವಾದಗಳು ಎಂದು ವೀಡಿಯೊ ಸಂದೇಶದಲ್ಲಿ ನೌಶಾದ್ ಹೇಳಿದ್ದಾರೆ.
ರಾಜ್ಕೋಟ್ ನಲ್ಲಿ ಪುತ್ರ ಸರ್ಫರಾಝ್ ಖಾನ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದಾಗ ನೌಶಾದ್ ತನ್ನ ಪುತ್ರನೊಂದಿಗೆ ಕಾಣಿಸಿಕೊಂಡಿದ್ದರು. ತಂದೆ-ಮಗನ ಕುರಿತಾದ ಸ್ಟೋರಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇಡೀ ಕುಟುಂಬ ಎಂತಹ ತ್ಯಾಗ ಮಾಡಿತ್ತು ಎಂಬ ವಿಚಾರ ಎಲ್ಲರಿಗೂ ತಿಳಿದಿತ್ತು.
ಸರ್ಫರಾಝ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಕೂಡ ಕ್ರಿಕೆಟಿಗನಾಗಿದ್ದು ರಣಜಿ ಟ್ರೋಫಿಯಲ್ಲಿ ಆಡುವ ಮೂಲಕ ದೇಶೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು. ಮುಂಬೈ ರಾಜ್ಯ ತಂಡದ ಪರ ಆಡುತ್ತಿದ್ದಾರೆ.