ಏಷ್ಯನ್ ಗೇಮ್ಸ್: ಚೀನಿ ಅಧಿಕಾರಿಗಳಿಂದ ನೀರಜ್ ಛೋಪ್ರಾಗೆ ವಂಚನೆ ಯತ್ನ ?

Update: 2023-10-05 03:08 GMT

Photo: X/sachin_rt

ಹೊಸದಿಲ್ಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಛೋಪ್ರಾ ಚಿನ್ನ ಗೆದ್ದರೂ, ಕೂಟದ ಅಧಿಕಾರಿಗಳು, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಥ್ಲೀಟ್‍ಗೆ ವಂಚಿಸಲು ಹುನ್ನಾರ ನಡೆಸಿದ್ದರೇ ಎಂಬ ವಿವಾದ ಎದ್ದಿದೆ. "ಚೀನಿ ಅಧಿಕಾರಿಗಳು ಮೋಸ ಮಾಡಲು ಪ್ರಯತ್ನಿಸಿದ್ದಾರೆ ಹಾಗೂ ಭಾರತೀಯರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿದ್ದಾರೆ" ಎಂದು ಖ್ಯಾತ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಆಪಾದಿಸಿದ್ದಾರೆ.

ಜಾವೆಲಿನ್ ಥ್ರೋ ಮೊದಲ ಪ್ರಯತ್ನದಲ್ಲಿ ಛೋಪ್ರಾ 85 ಮೀಟರ್ ಗಡಿಯನ್ನು ನಿರಾಯಾಸವಾಗಿ ದಾಟಿದ್ದರು. ಆದರೆ ಅದನ್ನು ಅಧಿಕಾರಿಗಳು ದಾಖಲಿಸಿಕೊಂಡಿಲ್ಲ ಹಾಗೂ ಇದಕ್ಕೆ ಕಾರಣವನ್ನೂ ನೀಡಿಲ್ಲ. "ಮೊದಲ ಪ್ರಯತ್ನದ ಎಸೆತವನ್ನು ಏಕೆ ಅಳೆಯಲಿಲ್ಲ ಎನ್ನುವುದು ಗೊತ್ತಿಲ್ಲ. ನನ್ನ ಬಳಿಕ ಎರಡು ಹಾಗೂ ಮೂರನೇ ಸ್ಪರ್ಧಿಗಳ ಅಂತರವನ್ನು ಅಳೆಯಲಾಯಿತು. ನನ್ನ ಮೊದಲ ಥ್ರೋ ಏನಾಯಿತು ಎಂದು ಕೇಳುತ್ತಲೇ ಇದ್ದೆ" ಎಂದು ನಾಲ್ಕನೇ ಪ್ರಯತ್ನದಲ್ಲಿ ಚಿನ್ನದ ಸಾಧನೆ ಮಾಡಿದ ಛೋಪ್ರಾ ವಿವರಿಸಿದರು.

"ನನಗೆ ಇದು ಒಗಟಾಗಿ ಕಂಡಿತು ಹಾಗೂ ಗೊಂದಲಕ್ಕೆ ಕಾರಣವಾಯಿತು. ಯಾವುದೇ ಸ್ಪರ್ಧೆಗಳಲ್ಲಿ ಇದುವರೆಗೆ ಹೀಗೆ ಆಗಿರಲಿಲ್ಲ. ಜಾವೆಲಿನ್ ಬಿದ್ದ ಜಾಗ ಬಹುಶಃ ಅವರಿಗೆ ಗೊತ್ತಾಗಲಿಲ್ಲ; ಅವರು ಹುಡುಕುತ್ತಿರಬೇಕು ಎನಿಸಿತು" ಎಂದು ಛೋಪ್ರಾ ಹೇಳಿದರು.

ಬೆಳ್ಳಿ ಪದಕ ಗೆದ್ದ ಮತ್ತೊಬ್ಬ ಭಾರತೀಯ ಪಟು ಕಿಶೋರ್ ಜೆನ ಅವರ ಎರಡನೇ ಪ್ರಯತ್ನವನ್ನು ಮೊದಲು ಮಾನ್ಯ ಮಾಡಿರಲಿಲ್ಲ. ಆದರೆ ಬಳಿಕ ನಿರ್ಧಾರ ವಾಪಾಸು ಪಡೆಯಲಾಯಿತು.

ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಭಾರತೀಯರನ್ನು ಗುರಿಮಾಡುತ್ತಿದ್ದಾರೆ ಎಂದು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ದೂರಿದ್ದಾರೆ. "ಅಥ್ಲೀಟ್‍ಗಳನ್ನು ವಂಚಿಸಿ ಅಧೀರಗೊಳಿಸುವ ಪ್ರಯತ್ನ ನಡೆದಿದೆ. ನೀರಜ್ ಅವರ ಮೊದಲ ಯತ್ನ ಅತ್ಯುತ್ತಮವಾಗಿದ್ದು, ಇದನ್ನು ಅಳೆಯದಿರುವುದು ಕಳವಳಕಾರಿ. ಈ ಬಗ್ಗೆ ಪ್ರತಿಭಟಿಸುವಂತೆ ಛೋಪ್ರಾಗೆ ಸೂಚಿಸಿದ್ದೆವು" ಎಂದರು.

ಆದರೆ ಛೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.8 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಜೆನಾ ಕೂಡಾ ತಮ್ಮ ನಾಲ್ಕನೇ ಸುತ್ತಿನಲ್ಲಿ 87.54 ಮೀಟರ್ ದೂರಕ್ಕೆ ಎಸೆದು 2024ರ ಒಲಿಂಪಿಕ್ಸ್ ಟಿಕೆಟ್ ಖಚಿತಪಡಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News