ಚಿನ್ನ ಗೆದ್ದ ಅರ್ಷದ್ ಗೆ ನೆರವಾಗಿದ್ದ ನೀರಜ್ ಚೋಪ್ರಾ
ಭಾರತ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಈವರೆಗೆ ಗೆದ್ದಿರುವ 5 ಪದಕಗಳಲ್ಲಿ ನಾಲ್ಕು ಕಂಚಿನ ಪದಕಗಳು. ಹಾಗಿದ್ದು ಶುಕ್ರವಾರ ತಡರಾತ್ರಿ ದೇಶವಿಡೀ ನಿದ್ದೆ ಬಿಟ್ಟು ಕೂತು ನೋಡಿ, ನಮ್ಮ ಹೆಮ್ಮೆಯ ಅಥ್ಲೀಟ್ ಒಬ್ಬ ಒಲಿಂಪಿಕ್ಸ್ ಬೆಳ್ಳಿ ಪದಕವನ್ನೇ ಗೆದ್ದುಕೊಂಡರೂ ಆ ಖುಷಿಯಲ್ಲಿ ಏನೋ ಒಂದು ಕೊರತೆ... ಕಾರಣ ಬೆಳ್ಳಿ ಪದಕ ಗೆದ್ದುಕೊಂಡ ಆ ಅಥ್ಲೀಟ್ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಈವರೆಗೆ ಯಾವುದೇ ಬೆಳ್ಳಿ ಪದಕ ಗೆಲ್ಲದಿದ್ದರೂ, ಈ ಬೆಳ್ಳಿ ಪದಕ ಸ್ವಲ್ಪ ಸಣ್ಣದಾಗಿ ಕಾಣುತ್ತಿರುವುದು ನೀರಜ್ ಮೇಲೆ ದೇಶ ಇಟ್ಟಿರುವ ಭರವಸೆಯೇ ಸಾಕ್ಷಿ.
ಈ ಬಗ್ಗೆ ಎಕ್ಸ್ ನಲ್ಲಿ ಒಂದು ಪೋಸ್ಟ್ ಹೀಗಿತ್ತು...
"ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಗೆದ್ದುಕೊಂಡದ್ದು ಕೇವಲ ಬೆಳ್ಳಿ ಪದಕ ಅಲ್ಲ. ಬದಲಿಗೆ ದೇಶದ ಕೋಟ್ಯಾಂತರ ಜನರ ಪ್ರೀತಿಯನ್ನು. ಕ್ರಿಕೆಟ್ ಅಲ್ಲದ ಬೇರೊಂದು ಆಟವನ್ನು ದೇಶದ ಕೋಟ್ಯಾಂತರ ಕ್ರೀಡಾ ಪ್ರೇಮಿಗಳು ವಾರದ ದಿನದಲ್ಲಿ ತಡರಾತ್ರಿ ನಿದ್ದೆ ಮಾಡದೆ ನೋಡಿದ್ದು ನೀರಜ್ ಪಾಲಿಗೆ ಅತಿ ದೊಡ್ಡ ವಿಜಯ" ಎಂದಿತ್ತು ಆ ಪೋಸ್ಟ್.
ಒಲಿಂಪಿಕ್ಸ್ ನಲ್ಲಿ ಯಾವುದಾದರೂ ಒಂದು ಪದಕ ಬಂದರೆ ಸಾಕು ಎಂಬಂತಿದ್ದ ಭಾರತೀಯರ ಪಾಲಿಗೆ " ಇಲ್ಲ ನಾವು ಚಿನ್ನವನ್ನೇ ಗೆಲ್ಲೋದು " ಎಂಬಷ್ಟರ ಮಟ್ಟಿಗೆ ಆತ್ಮ ವಿಶ್ವಾಸ ಹಾಗು ಭರವಸೆ ತಂದ ಕ್ರೀಡಾಪಟು ಯಾರಾದರೂ ಇದ್ದರೆ ಅದು ನೀರಜ್ ಚೋಪ್ರಾ. ಅದಕ್ಕೆ ಕಾರಣ ಜಾಗತಿಕ ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ನೀರಜ್ ನ ಅಮೋಘ ದಾಖಲೆಗಳು.
2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕಾಗಿ ಚಿನ್ನ ಗೆದ್ದ ನೀರಜ್ ಆಗ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಭಾರತಕ್ಕಾಗಿ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದರು. 2023ರಲ್ಲಿ ವರ್ಲ್ಡ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಾಗ, ಆ ದಾಖಲೆ ಬರೆದ ಮೊದಲ ಏಷಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಚೋಪ್ರಾ ಅವರು 2016 ರ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ 86.48 ಮೀಟರ್‌ಗಳ ವಿಶ್ವ ಅಂಡರ್ 20 ದಾಖಲೆ ಬರೆದವರು. ಈ ಮೂಲಕ ಟ್ರ್ಯಾಕ್ ಎಂಡ್ ಫೀಲ್ಡ್ ಕ್ರೀಡೆಯಲ್ಲಿ ವಿಶ್ವ ದಾಖಲೆಯನ್ನು ಬರೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೀರಜ್ 2018 ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2018 ರ ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದರು. ಅಲ್ಲಿ ಅವರು ಭಾರತದ ಧ್ವಜಧಾರಿಯಾಗಿಯೂ ಆಗಿದ್ದರು.2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನೂ ಗೆದ್ದವರು ನೀರಜ್. ಆಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಯನ್ನು ಅವರು ತಮ್ಮದಾಗಿಸಿಕೊಂಡಿದ್ದರು.
ನಂತರ ಅವರು 2023 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದರು ಮತ್ತು 2022 ರ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಎರಡನೇ ಚಿನ್ನವನ್ನು ಗೆದ್ದುಕೊಂಡರು. ಇಷ್ಟೆಲ್ಲ ದಾಖಲೆಗಳ ಒಡೆಯ ಈ ಬಾರಿ ಒಲಿಂಪಿಕ್ಸ್ ಚಿನ್ನ ಗೆಲ್ಲಲು ವಿಫಲವಾದಾಗ ಸ್ವಲ್ಪ ಬೇಸರ ಸಾಮಾನ್ಯ. ತನ್ನಿಂದ ಸಾಧ್ಯವಿರುವುದನ್ನು ಗೆದ್ದುಕೊಳ್ಳಲು ವಿಫಲವಾದಾಗ ಸ್ವಲ್ಪ ಬೇಸರವಾಗುವುದು ಮಾನವ ಪ್ರವೃತ್ತಿ.
ನೀರಜ್ ಸ್ವಲ್ಪ ಸಮಯ ಗಾಯಗಳಿಂದ ಬಳಲುತ್ತಿದ್ದರಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬಿದ್ದಿರಬಹುದು ಎಂಬ ಅಭಿಪ್ರಾಯಗಳೂ ಇವೆ. ಏನೇ ಇದ್ದರೂ ನೀರಜ್ ಇಡೀ ಭಾರತದ ಪಾಲಿಗೆ ವಿಶ್ವ ಚಾಂಪಿಯನ್.
ಏಕೆಂದರೆ ನೀರಜ್ ಫೀಲ್ಡ್ ನಲ್ಲಿ ಮಾತ್ರವಲ್ಲ ಫೀಲ್ಡ್ ಹೊರಗೆಯೂ ಚಾಂಪಿಯನ್. ನಿನ್ನೆ ನೀರಜ್ ಬೆಳ್ಳಿ ಪದಕ ಗೆದ್ದುಕೊಂಡರೆ ಚಿನ್ನ ಗೆದ್ದಿದ್ದು ನೆರೆಯ ದೇಶ ಪಾಕಿಸ್ತಾನದ ಅರ್ಷದ್ ನದೀಮ್. 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅರ್ಷದ್ ನದೀಮ್ ಹೊಸ ಒಲಿಂಪಿಕ್ಸ್ ದಾಖಲೆಯನ್ನೇ ಬರೆದಿದ್ದಾರೆ.
2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಅರ್ಷದ್ "ನನ್ನ ಜಾವೆಲಿನ್ ಏಳು ಎಂಟು ವರ್ಷ ಹಳೆಯದಾಗಿಬಿಟ್ಟಿದೆ. ಇನ್ನು ಅದು ಉಪಯೋಗಿಸುವ ಸ್ಥಿತಿಯಲಿಲ್ಲ" ಎಂದು ಸಹಾಯ ಕೇಳಿದ್ದರು.
ಆಗ " ಅರ್ಷದ್ ವಿಶ್ವಮಟ್ಟದ ಆಟಗಾರ, ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಬೇಕು, ಪಾಕಿಸ್ತಾನದ ರಾಷ್ಟ್ರೀಯ ಫೆಡರೇಶನ್ ಅಥವಾ ಬೇರೆ ಯಾರಾದ್ರೂ ಪ್ರಾಯೋಜಕರು ಅರ್ಷದ್ ಸಹಾಯಕ್ಕೆ ನಿಲ್ಲಬೇಕು" ಎಂದು ಹೇಳಿ ಅರ್ಶದ್ ಗೆ ಬೆಂಬಲವಾಗಿ ನಿಂತಿದ್ದು ನೀರಜ್ ಚೋಪ್ರಾ. ನೈಜ ಚಾಂಪಿಯನ್ ನ ಗುಣಗಳನ್ನೇ ನೀರಜ್ ಚೋಪ್ರಾ ಫೀಲ್ಡ್ ನಲ್ಲಿ ಹಾಗು ಫೀಲ್ಡ್ ಹೊರಗೂ ಪ್ರದರ್ಶಿಸುತ್ತಾ ಬಂದಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಾಗಿಯೂ ಮಿಡಿಯುವ ಆ ಮನಸ್ಸು, ನೀರಜ್ ನನ್ನು ರಿಯಲ್ ಚಾಂಪಿಯನ್ ಮಾಡಿದೆ.
ನೀರಜ್ ಈ ರೀತಿ ಬೆಳೆದು ಬಂದಿರುವ ಹಿಂದೆ ಅವರ ಪೋಷಕರ ಪಾತ್ರ ದೊಡ್ಡದಿದೆ. ನೀರಜ್ ಪ್ಯಾರಿಸ್ ನಲ್ಲಿ ಬೆಳ್ಳಿ ಪದಕ ವಿಜೇತರಾದ ನಂತರ, "ಚಿನ್ನದ ಪದಕ ಗೆದ್ದುಕೊಂಡಿರುವುದು ಪಾಕಿಸ್ತಾನದ ಆರ್ಷದ್, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು" ಎಂದು ಮಾಧ್ಯಮದವರು ಕೇಳಿದಾಗ, ಕ್ರೀಡೆ ದೇಶಗಳನ್ನು ಹತ್ತಿರವಾಗಿಸಬೇಕು ಎಂದು ನೀರಜ್ ತಂದೆ ಸತೀಶ್ ಚೋಪ್ರಾ ಹೇಳಿದ್ದಾರೆ.
ಚಿನ್ನ ಗೆದ್ದವನೂ ನನ್ನ ಮಗನಂತೆಯೇ ಎಂದು ಹೇಳುವ ವಿಶಾಲ ಮನಸ್ಸು ನೀರಜ್ ತಾಯಿ ಸರೋಜ್ ದೇವಿ ಅವರದ್ದು.ತಂದೆ ತಾಯಿಯಲ್ಲಿರುವ ಅದೇ ಸಂಸ್ಕಾರ ಮಗನಲ್ಲೂ ಇದೆ. ನೀರಜ್ ರ ಈ ಚಾಂಪಿಯನ್ ಮನಸ್ಸಿಗೆ ಯಾವುದೇ ಚಿನ್ನವೂ ಸಾಟಿಯಲ್ಲ. ಈಗ ನೀರಜ್ ಚೋಪ್ರಾ ಬೆಳ್ಳಿ ಗೆದ್ದರೂ, ಸತತ ಎರಡು ಒಲಿಂಪಿಕ್ಸ್ ಪದಕ ಗೆದ್ದ ಪ್ರಪ್ರಥಮ ಭಾರತೀಯ ಟ್ರ್ಯಾಕ್ ಎಂಡ್ ಫೀಲ್ಡ್ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.
ಬೆಳ್ಳಿ ಗೆದ್ದ ನಂತರ ನೀರಜ್ ಪ್ರತಿಕ್ರಿಯೆ ಹೀಗಿತ್ತು. " ಇಂದು ಅರ್ಷದ್ ನ ದಿನ. ನಾನು ನನ್ನಅತ್ಯುತ್ತಮ ಪ್ರದರ್ಶನವನ್ನು ಇನ್ನೂ ನೀಡಿಲ್ಲ. ಆ ದಿನ ಭವಿಷ್ಯದಲ್ಲಿ ಎಂದಾದರೂ ಬರಬಹುದು. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರುವ ದಿನ ಆ ಶ್ರೇಷ್ಠ ಎಸೆತ ಹೊರಬರಬಹುದು" ಎಂದು ನೀರಜ್ ಹೇಳಿದ್ದಾರೆ.