ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸುವತ್ತ ನೀರಜ್ ಚೋಪ್ರಾ ಚಿತ್ತ
ಪ್ಯಾರಿಸ್: ಹಲವು ಪ್ರಥಮಗಳ ಸರದಾರ, ಭಾರತದ ಸ್ಟಾರ್ ಕ್ರೀಡಾಪಟು ನೀರಜ್ ಚೋಪ್ರಾ ತನ್ನ ಎರಡನೇ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿದ್ದು, ಜಾವೆಲಿನ್ ಎಸೆತದಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ.
ಮಂಗಳವಾರ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ಚೋಪ್ರಾ ತನ್ನ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದಾರೆ. ಹರ್ಯಾಣದ ಕ್ರೀಡಾಪಟು ಆಗಸ್ಟ್ 8ರಂದು ನಡೆಯಲಿರುವ ಫೈನಲ್ ನಲ್ಲಿ ಅರ್ಹತೆ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಚೋಪ್ರಾ ಒಂದು ವೇಳೆ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಹಾಗೂ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಐದನೇ ಕ್ರೀಡಾಳುವೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಥ್ಲೀಟ್ ಗಳೆಂದರೆ: ಎರಿಕ್ ಲೆಮ್ಮಿಂಗ್(ಸ್ವೀಡನ್;1908 ಹಾಗೂ 1912), ಜಾನಿ ಮೈರಾ(ಫಿನ್ಲ್ಯಾಂಡ್, 1920,1924), ಜಾನ್ ಝೆಲೆಝ್ನಿ(ಝೆಕ್ ಗಣರಾಜ್ಯ, 1992, 1996, 2000) ಹಾಗೂ ಆಂಡ್ರಿಯಾಸ್ ಥೋರ್ಕಿಲ್ಡ್ಸನ್(ನಾರ್ವೆ, 2004, 2008).
26ರ ಹರೆಯದ ವಿಶ್ವ ಚಾಂಪಿಯನ್ ಚೋಪ್ರಾ ಈ ವರ್ಷ ಕೇವಲ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ಮೇನಲ್ಲಿ ನಡೆದಿದ್ದ ದೋಹಾ ಡೈಮಂಡ್ ಲೀಗ್ ನಲ್ಲಿ ಈ ವರ್ಷದ ಶ್ರೇಷ್ಠ ಪ್ರದರ್ಶನ(88.36 ಮೀ.)ನೀಡಿದ್ದ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯ ಕಾರಣಕ್ಕೆ ಮೇ 28ರಂದು ಒಸ್ಟ್ರಾವ ಗೋಲ್ಡನ್ ಸ್ಪೈಕ್ ನಿಂದ ಹಿಂದೆ ಸರಿದಿದ್ದರು.
ಜೂನ್ 18ರಂದು ಫಿನ್ಲ್ಯಾಂಡ್ ನಲ್ಲಿ ನಡೆದಿದ್ದ ಪಾವೊ ನುರ್ಮಿ ಗೇಮ್ಸ್ ನಲ್ಲಿ 85.97 ಮೀ. ದೂರ ಜಾವೆಲಿನ್ ಎಸೆದು ಪುಟಿದೆದ್ದಿದ್ದರು.
ಜುಲೈ 7ರಂದು ನಡೆದಿದ್ದ ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದರು. ಈ ವರ್ಷ ಯಾವುದೇ ಸ್ಪರ್ಧೆಯಲ್ಲಿ ಸೇರ್ಪಡೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು.
ಭಾರತದ ಸೂಪರ್ಸ್ಟಾರ್ ಚೋಪ್ರಾ ಅವರಿಗೆ ಮತ್ತೊಮ್ಮೆ ಜರ್ಮನಿಯ ಜುಲಿಯನ್ ವೆಬೆರ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸನ್ ಹಾಗೂ ಝೆಕ್ನ ಜೇಕಬ್ ವಡ್ಲೆಚ್ರಿಂದ ಪ್ರಮುಖ ಸವಾಲು ಎದುರಾಗುವ ಸಾಧ್ಯತೆಯಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ವಡ್ಲೆಚ್ ಅವರು ದೋಹಾ ಡೈಮಂಡ್ ಲೀಗ್ ನಲ್ಲಿ ಚೋಪ್ರಾರನ್ನು ಮಣಿಸಿದ್ದರು.
ಪುರುಷರ ಜಾವೆಲಿನ್ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಇನ್ನೋರ್ವ ಅಥ್ಲೀಟ್ ಕಿಶೋರ್ ಜೆನಾ ಕಳೆದ ವರ್ಷ ಏಶ್ಯನ್ ಗೆಮ್ಸ್ ನಲ್ಲಿ 87.54 ಮೀ. ದೂರಕ್ಕೆ ಜಾವೆಲಿನ್ ಎಸೆದು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.
ಪ್ರಸಕ್ತ ಒಲಿಂಪಿಕ್ಸ್ ನಲ್ಲಿ ಇನ್ನಷ್ಟೇ ಉತ್ತಮ ಪ್ರದರ್ಶನ ನೀಡಬೇಕಾಗಿರುವ ಭಾರತೀಯರಿಗೆ ಚೋಪ್ರಾ ಅಗತ್ಯವಿರುವ ಆಶಾವಾದವನ್ನು ಮೂಡಿಸುವ ಭರವಸೆಯಲ್ಲಿದ್ದಾರೆ.
..............