ಡೈಮಂಡ್ ಲೀಗ್: 2ನೇ ಸ್ಥಾನಕ್ಕೆ ತೃಪ್ತಿಪಟ್ಟ ನೀರಜ್ ಚೋಪ್ರಾ
ಹೊಸದಿಲ್ಲಿ: ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಶನಿವಾರ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‍ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರತೀಯ ಅಥ್ಲೀಟ್ 83.80 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಆದರೆ ಜೆಕ್ ಗಣರಾಜ್ಯದ ಜಾಕುಬ್ ವದ್ಲೇಚ್ ಎಸೆದ 84.24 ಮೀಟರ್ ದೂರವನ್ನು ಹಿಂದಿಕ್ಕಲು ಇದು ಸಾಕಾಗಲಿಲ್ಲ. ಫಿನ್ಲೆಂಡ್‍ನ ಒಲಿವರ್ ಹೆಲಂಡರ್ 83.74 ಮೀಟರ್ ನೊಂದಿಗೆ ಮೂರನೇ ಸ್ಥಾನ ಪಡೆದರು.
ಇತ್ತೀಚಿನ ದಿನಗಳಲ್ಲಿ ನೀರಜ್ ಇದಕ್ಕಿಂತ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆದಿದ್ದರೂ, ಏಷ್ಯನ್ ಗೇಮ್ಸ್ ಸನಿಹದಲ್ಲಿರುವುದರಿಂದ ಈ ಕೂಟದಲ್ಲಿ ತಮ್ಮ ಅತ್ಯುತ್ತಮ ಸಾಮಥ್ರ್ಯವನ್ನು ಪ್ರದರ್ಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊದಲ ಪ್ರಯತ್ನದಲ್ಲಿ ಚೋಪ್ರಾ ಅನರ್ಹಗೊಂಡರು. ಮೊದಲ ಸುತ್ತಿನಲ್ಲಿ ಅವರು ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿದ್ದರೆ, ಜಾಕುಬ್ 84.01 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನಿಯಾಗಿದ್ದರು. ಎರಡನೇ ಪ್ರಯತ್ನದಲ್ಲಿ ಚೋಪ್ರಾ 83.8 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರೂ, ಅದು ಜಾಕೋಬ್ ಅವರನ್ನು ಹಿಂದಿಕ್ಕಲು ಸಾಕಾಗಲಿಲ್ಲ. ಮೂರನೇ ಪ್ರಯತ್ನದಲ್ಲಿ ಚೋಪ್ರಾ ಕೇವಲ 81.37 ಮೀಟರ್ ದೂರಕ್ಕೆ ಎಸೆದರೆ, ಒಲಿವೆರ್ ಹೆಲಂಡೆರ್ 83.74 ಮೀಟರ್ ಎಸೆದರು.