ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್: ಐತಿಹಾಸಿಕ ಚಿನ್ನ ಗೆದ್ದ ನೀರಜ್ ಚೋಪ್ರಾ

Update: 2023-08-28 14:30 GMT

ಬುಡಾಪೆಸ್ಟ್: ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ರವಿವಾರ ತಡರಾತ್ರಿ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಗೌರವದೊಂದಿಗೆ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.

ಫೈನಲ್‌ನಲ್ಲಿ ನೀರಜ್ ಅವರು ಜಾವೆಲಿನ್ ಅನ್ನು 88.17 ಮೀ.ದೂರ ಎಸೆಯುವ ಮೂಲಕ ಅಗ್ರ ಸ್ಥಾನ ಪಡೆದರು. ಆರು ಥ್ರೋಗಳಿಗೆ ಅವಕಾಶವಿದ್ದ ಫೈನಲ್‌ನ 2ನೇ ಪ್ರಯತ್ನದಲ್ಲಿ ಅವರಿಂದ ಈ ಸಾಧನೆ ಮೂಡಿ ಬಂತು. ಚೋಪ್ರಾ ಅವರ ಮೊದಲ ಎಸೆತ ಫೌಲ್ ಆಗಿತ್ತು. ಮೊದಲ ಸುತ್ತಿನಲ್ಲಿ ಲೋಪ ಎಸೆಗಿದ ಮೊದಲ ಸ್ಪರ್ಧಿ ಎನಿಸಿಕೊಂಡರು. 2ನೇ ಪ್ರಯತ್ನದಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡರು. ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಲಭಿಸಿರುವ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ.

ನೀರಜ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್(87.82 ಮೀ.)ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಝೆಕ್ ರಿಪಬ್ಲಿಕ್‌ನ ಜಾಕುಬ್ ವಾದ್ಲೇಚ್(86.67 ಮೀ.)ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಸ್ಪರ್ಧೆಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಚೋಪ್ರಾ ತಮ್ಮ ಉಳಿದ ಪ್ರಯತ್ನಗಳಲ್ಲಿ ಕ್ರಮವಾಗಿ 86.32, 84.64, 87.73 ಹಾಗೂ 83.98 ಮೀಟರ್ ದೂರಕ್ಕೆ ಈಟಿ ಎಸೆಯುವ ಮೂಲಕ ಕೂಟದಲ್ಲಿ ತಮ್ಮ ಪ್ರಾಬಲ್ಯ ಮೆರೆದರು.

ಕರ್ನಾಟಕದ ಡಿ.ಪಿ. ಮನು(83.72 ಮೀ.)ಆರನೇ ಸ್ಥಾನ ಪಡೆದರೆ, ಕಿಶೋರ್ ಜೇನಾ(84.77 ಮೀ.)ಐದನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. 84.77 ಮೀ.ದೂರಕ್ಕೆ ಜಾವೆಲಿನ್ ಎಸೆದ ಕಿಶೋರ್ ವೈಯಕ್ತಿಕವಾಗಿ ಜೀವಮಾನದ ಶ್ರೇಷ್ಠ ಸಾಧನೆ ಮಾಡಿದರು.

ಎಲ್ಲ ಪ್ರಮುಖ ಕೂಟಗಳಲ್ಲಿ ಚಿನ್ನ: 25ರ ಹರೆಯದ ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್ ಹೊರತುಪಡಿಸಿ ಇತರ ಎಲ್ಲ ಪ್ರಮುಖ ಕೂಟಗಳಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಇದೀಗ ವಿಶ್ವ ಚಾಂಪಿಯನ್ ಎನಿಸುವ ಮೂಲಕ ದೇಶದ ಹಿರಿಮೆ ಹೆಚ್ಚಿಸಿದ್ದಾರೆ.

2022ರಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಚೋಪ್ರಾ ಅವರು ಈ ಬಾರಿ ಚಿನ್ನ ಗೆಲ್ಲುವ ಫೇವರಿಟ್ ಸ್ಪರ್ಧಿ ಎನಿಸಿಕೊಂಡಿದ್ದರು.

ಚೋಪ್ರಾ ಅವರು ಒಲಿಂಪಿಕ್ಸ್ (2021,ಟೋಕಿಯೊ), ಏಶ್ಯನ್ ಗೇಮ್ಸ್(2018) ಹಾಗೂ ಕಾಮನ್‌ವೆಲ್ತ್ ಕೂಟದಲ್ಲಿ(2018)ಚಿನ್ನ ಜಯಿಸಿದ್ದಾರೆ. ಕಳೆದ ವರ್ಷ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿದ್ದರು.

ಬಿಂದ್ರಾ ಬಳಿಕ 2ನೇ ಕ್ರೀಡಾಪಟು

ಶೂಟರ್ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ 2ನೇ ಕ್ರೀಡಾಪಟು ಎಂಬ ಗೌರವವನ್ನು ಚೋಪ್ರಾ ತನ್ನದಾಗಿಸಿಕೊಂಡಿದ್ದಾರೆ. ಬಿಂದ್ರಾ ಅವರು 2008ರ ಒಲಿಂಪಿಕ್ಸ್‌ನಲ್ಲಿ ಹಾಗೂ 2006ರಲ್ಲಿ ಯಾಗ್ರೆಬ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News