ಪಾಕಿಸ್ತಾನಿ ಅತ್ಲೀಟ್ ನನ್ನು ಸೋಲಿಸಿ ನಿಮ್ಮ ಮಗ ಚಿನ್ನ ಗೆದ್ದಿದ್ದಕ್ಕೆ ಏನನ್ನಿಸುತ್ತದೆ ಎಂಬ ವರದಿಗಾರನ ಪ್ರಶ್ನೆಗೆ ತಕ್ಕ ಉತ್ತರ ನೀಡಿದ ನೀರಜ್ ಚೋಪ್ರಾ ತಾಯಿ
ಹೊಸದಿಲ್ಲಿ: ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯನಾಗಿರುವ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. . 25 ವರ್ಷ ವಯಸ್ಸಿನ ಚೋಪ್ರಾ ಫೈನಲ್ ಸುತ್ತಿನಲ್ಲಿ 88.17 ಮೀಟರ್ಗಳ ಅಸಾಧಾರಣ ಎಸೆತದೊಂದಿಗೆ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದರು. ಈವೆಂಟ್ ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಎರಡನೇ ಸ್ಥಾನವನ್ನು ಗಳಿಸಿದ್ದರು.
ಭಾರತೀಯ ಬೆಂಬಲಿಗರ ಉತ್ಸಾಹದ ನಡುವೆ ಪಾಕಿಸ್ತಾನದ ಪ್ರತಿಸ್ಪರ್ಧಿ ವಿರುದ್ಧ ಭಾರತೀಯ ಅತ್ಲೀಟ್ ವೊಬ್ಬನ ಗೆಲುವು ದೇಶದಾದ್ಯಂತ ಹರ್ಷವನ್ನು ಉಂಟುಮಾಡಿತು. ಆದಾಗ್ಯೂ, ಚೋಪ್ರಾ ಅವರ ತಾಯಿ, ಸರೋಜ್ ದೇವಿ, ಜಾಗತಿಕ ಈವೆಂಟ್ ನಲ್ಲಿ ತನ್ನ ಮಗ ಪಾಕಿಸ್ತಾನಿ ಎದುರಾಳಿಯ ವಿರುದ್ಧ ಗೆದ್ದ ಬಗ್ಗೆ ವರದಿಗಾರ ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರವು ನಿಜವಾಗಿಯೂ ಎಲ್ಲರ ಹೃದಯವನ್ನು ಗೆದ್ದಿದೆ.
ತಮ್ಮ ಮಗನ ಗಮನಾರ್ಹ ಸಾಧನೆಯ ನಂತರ ಸರೋಜ್ ದೇವಿ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದ ವೀಡಿಯೊ ಈಗ ವೈರಲ್ ಆಗಿದೆ.
ಪಾಕಿಸ್ತಾನದ ಅತ್ಲೀಟ್ ಅರ್ಷದ್ ವಿರುದ್ಧ ತಮ್ಮ ಮಗನ ವಿಜಯದ ಬಗ್ಗೆ ತಾವೆಷ್ಟು ಭಾವುಕರಾಗಿದ್ದೀರಿ? ಎಂದು ವರದಿಗಾರ ಆಫ್ ಕ್ಯಾಮೆರಾದಲ್ಲಿ ಕೇಳಿದಾಗ, “ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ ಇಲ್ಲಿ ಪಾಕಿಸ್ತಾನ ಅಥವಾ ಹರ್ಯಾಣದವರು ಎಂಬ ಪ್ರಶ್ನೆಯೇ ಇಲ್ಲ'' ಎಂದರು.
''ಇದು ಬಹಳ ಸಂತೋಷದ ವಿಷಯವಾಗಿದೆ. ಆ ಪಾಕಿಸ್ಥಾನಿ ಗೆದ್ದಿದ್ದರೂ ಬಹಳ ಸಂತೋಷವಾಗುತ್ತಿತ್ತು'' ಎಂದು ಸರೋಜ್ ದೇವಿ ಹೇಳಿದರು.
ನೀರಜ್ ಒಬ್ಬ ಪಾಕಿಸ್ತಾನಿ ಅತ್ಲೀ ಟ್ ನನ್ನು ಸೋಲಿಸಿ ಚಿನ್ನ ಗೆದ್ದಿದ್ದಕ್ಕೆ ಏನನ್ನಿಸುತ್ತದೆ ಎಂದು ವರದಿಗಾರರು ನೀರಜ್ ಚೋಪ್ರಾ ಅವರ ತಾಯಿ ಬಳಿ ಕೇಳಿದರು. ಅದಕ್ಕೆ ಅವರು,'' ಒಬ್ಬ ಆಟಗಾರನು ಆಟಗಾರ ಅಷ್ಟೇ. ಅವನು ಎಲ್ಲಿಂದ ಬಂದಿದ್ದಾನೆ ಎಂಬುದು ಮುಖ್ಯವಲ್ಲ, ಪಾಕಿಸ್ತಾನಿ ಆಟಗಾರ(ನದೀಮ್) ಗೆಲುವು ಸಾಧಿಸಿದ್ದರೂ ನನಗೆ ಸಂತೋಷವಾಗುತ್ತಿತ್ತು''ಎಂದರು.