ಡಬ್ಲ್ಯುಟಿಸಿ ರ‍್ಯಾಂಕಿಂಗ್: ಆಸ್ಟ್ರೇಲಿಯ, ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನ್ಯೂಝಿಲ್ಯಾಂಡ್

Update: 2024-02-07 17:42 GMT

Photo: ICC

ಹೊಸದಿಲ್ಲಿ, ಫೆ.7: ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ 281 ರನ್‌ನಿಂದ ಭರ್ಜರಿ ಜಯ ದಾಖಲಿಸಿರುವ ನ್ಯೂಝಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ನ್ಯೂಝಿಲ್ಯಾಂಡ್ ಎರಡನೇ ಬಾರಿ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿದ್ದಲ್ಲದೆ ತನ್ನ ಕ್ರಿಕೆಟ್ ಶಕ್ತಿಯನ್ನು ತೋರ್ಪಡಿಸಿತು.

ಮೊದಲ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಜಯಶಾಲಿಯಾಗಿರುವ ನ್ಯೂಝಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಸೋಲಿಸಿ 66.66 ಶೇ.ಪಾಯಿಂಟ್ಸ್‌ನೊಂದಿಗೆ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ.

ಈ ಮಹತ್ವದ ಸಾಧನೆಯ ಮೂಲಕ ಕಿವೀಸ್ ಈ ಹಿಂದೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೆಣಸಾಡಿರುವ ಭಾರತ ಹಾಗೂ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.

ಪ್ರಸಕ್ತ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ನ್ಯೂಝಿಲ್ಯಾಂಡ್ ಉತ್ತಮ ದಾಖಲೆ ಕಾಯ್ದುಕೊಂಡಿದೆ. ಬಾಂಗ್ಲಾದೇಶ ವಿರುದ್ಧ ಸರಣಿಯನ್ನು ಡ್ರಾಗೊಳಿಸಿರುವ ನ್ಯೂಝಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸುಲಭ ಜಯ ದಾಖಲಿಸಿದೆ.

ದಕ್ಷಿಣ ಆಫ್ರಿಕಾ-ನ್ಯೂಝಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ನಂತರ ಆಸ್ಟ್ರೇಲಿಯವು 2ನೇ ಸ್ಥಾನಕ್ಕೆ ಕುಸಿದರೆ, ಭಾರತ 3ನೇ ಸ್ಥಾನಕ್ಕೆ ಇಳಿದಿದೆ.

ಹೀನಾಯ ಸೋಲುಂಡಿರುವ ದಕ್ಷಿಣ ಆಫ್ರಿಕಾ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ದಕ್ಷಿಣ ಆಫ್ರಿಕಾಕ್ಕಿಂತ ಮುಂದಿವೆ.

ನಾಯಕ ಕೇನ್ ವಿಲಿಯಮ್ಸನ್ ಅವಳಿ ಶತಕ ಹಾಗೂ ರಚಿನ್ ರವೀಂದ್ರರ ದ್ವಿಶತಕದ ಸಹಾಯದಿಂದ ನ್ಯೂಝಿಲ್ಯಾಂಡ್ ಮೊದಲ ಟೆಸ್ಟ್‌ನ 3ನೇ ದಿನದಾಟದಂತ್ಯಕ್ಕೆ ಸುಸ್ಥಿತಿಗೆ ತಲುಪಿತ್ತು. 4ನೇ ದಿನವಾದ ಸೋಮವಾರ ಬೇ ಓವಲ್‌ನ ಮೋಡ ಕವಿದ ವಾತಾವರಣದ ಲಾಭ ಪಡೆದ ನ್ಯೂಝಿಲ್ಯಾಂಡ್ ವೇಗಿ ಜಮೀಸನ್, ಸ್ಪಿನ್ನರ್ ಸ್ಯಾಂಟ್ನರ್ ದಕ್ಷಿಣ ಆಫ್ರಿಕಾವನ್ನು 247 ರನ್‌ಗೆ ನಿಯಂತ್ರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News