ದ್ವಿಶತಕ ವಂಚಿತರಾದ ಮುಶೀರ್ ಖಾನ್
ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ ತಂಡವು ಇಂಡಿಯಾ ಬಿ ತಂಡದ ವಿರುದ್ಧ ಹಿನ್ನಡೆಯಲ್ಲಿದೆ.
ಭೋಜನ ವಿರಾಮದ ನಂತರ ಇಂಡಿಯಾ-ಬಿ 321 ರನ್‌ಗೆ ಆಲೌಟಾಯಿತು. 2ನೇ ದಿನದಾಟದಂತ್ಯಕ್ಕೆ ಇಂಡಿಯಾ ಎ 2 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದ್ದು, ರಿಯಾನ್ ಪರಾಗ್(ಔಟಾಗದೆ 27, 49 ಎಸೆತ)ಹಾಗೂ ಕೆ.ಎಲ್.ರಾಹುಲ್(ಔಟಾಗದೆ 23, 80 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಾಯಕ ಶುಭಮನ್ ಗಿಲ್(25, 43 ಎಸೆತ)ಹಾಗೂ ಮಯಾಂಕ್ ಅಗರ್ವಾಲ್(36, 45 ಎಸೆತ)ಮೊದಲ ವಿಕೆಟ್‌ಗೆ 57 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಗಿಲ್ ಹಾಗೂ ಅಗರ್ವಾಲ್ ಬೆನ್ನುಬೆನ್ನಿಗೆ ಔಟಾದರು.
ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿರುವ ಪರಾಗ್ ಹಾಗೂ ರಾಹುಲ್ ಇಂಡಿಯಾ ಎಗೆ ಆಸರೆಯಾಗಿದ್ದಾರೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮುಂದುವರಿಸಿದ ಇಂಡಿಯಾ ಬಿ ತಂಡದ ಮುಶೀರ್ ಖಾನ್ ಹಾಗೂ ಸೈನಿ ಮೊದಲ ಸೆಶನ್‌ನಲ್ಲಿ 88 ರನ್ ಗಳಿಸಿದರು. ಸೈನಿ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ 2ನೇ ಅರ್ಧಶತಕ(56 ರನ್, 144 ಎಸೆತ)ಗಳಿಸಿದರು. ಮುಶೀರ್ ಖಾನ್ ಕೇವಲ 19 ರನ್‌ನಿಂದ ದ್ವಿಶತಕ ವಂಚಿತರಾದರು. ಮುಶೀರ್ 181 ರನ್(373 ಎಸೆತ, 16 ಬೌಂಡರಿ, 5 ಸಿಕ್ಸರ್)ಗಳಿಸಿ ಔಟಾದರು.
ಮುಶೀರ್ ಹಾಗೂ ಸೈನಿ 8ನೇ ವಿಕೆಟ್‌ಗೆ 205 ರನ್ ಜೊತೆಯಾಟ ನಡೆಸಿ ದುಲೀಪ್ ಟ್ರೋಫಿ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದರು.