ಆಸ್ಟ್ರೇಲಿಯಾ ವಿರುದ್ಧದ ಏಕದಿನ ; 400ರ ಗುರಿ ನೀಡಿದ ಭಾರತ

Update: 2023-09-24 12:56 GMT

Photo: X \ @ICC

ಇಂದೋರ್ : ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಶತಕ ಹಾಗೂ ಕೆ ಎಲ್ ರಾಹುಲ್, ಸೂರ್ಯಕುಮಾರ್ ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡ 400ರ ಗುರಿ ನೀಡಿತು. 399 ರನ್‌ ಗಳಿಸುವುದರೊಂದಿಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ತನ್ನ ಅತೀ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿತು. 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದ ಆರಂಭದಲ್ಲಿ ಹೋಲ್ಕರ್ ಕ್ರೀಡಾಂಗಣ ಮಳೆಯಲ್ಲಿ ಮಿಂದೆದ್ದರೂ ರನ್ ಹೊಳೆಗೆ ಸಾಕ್ಷಿಯಾಯಿತು.

ಆಸ್ಟ್ರೇಲಿಯಾ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಆತಿಥೇಯ ಬ್ಯಾಟರ್ ಗಳು ವಿಶ್ವಕಪ್ ನಲ್ಲಿ ತಮ್ಮ ತಂಡದ ಉತ್ತಮ ಸಿದ್ಧತೆಯ ಪ್ರಯೋಗ ಪರೀಕ್ಷೆ ನಡೆಸಿದರು. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರೂ, ಅವರ ಅನುಪಸ್ಥಿತಿ ಎಲ್ಲಿಯೂ ಕಾಣಲಿಲ್ಲ.

ಭಾರತ ತಂಡ 3.4 ಓವರ್ ಗಳಲ್ಲಿ ತಂಡ 16 ರನ್ ಗಳಿಸಿದ್ದಾಗ ಋತ್ ರಾಜ್ ಗಾಯಕ್ವಾಡ್ 8 ರನ್ ಗೆ ಔಟ್ ಆದಾಗ ಆರಂಭಿಕ ಆಘಾತ ಅನುಭವಿಸಿತು. ಆಟಗಾರ ಶುಭಮನ್ ಗಿಲ್ ಅವರ ಸ್ಪೋಟಕ ಬ್ಯಾಟಿಂಗ್ ಗೆ 3 ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಜೊತೆಯಾದರು. 90 ಎಸೆತ ಎದುರಿಸಿದ ಶ್ರೇಯಸ್ ಅಯ್ಯರ್ 11 ಬೌಂಡರಿ ಸಹಿತ, 3 ಸಿಕ್ಸರ್ ಸಿಡಿಸಿ ಶತಕ ಗಳಿಸಿದರು. 105 ರನ್ ಗಳಿಸಿ 30.5 ನೇ ಓವರ್ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್ ಗೆ ಬಂದ ಕೆ.ಎಲ್ ರಾಹುಲ್ 38 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ ನಾಯಕನ ಆಸರೆ ನೀಡಿದರು. ತಮ್ಮ ಫಿಟ್ನೆಸ್ ಕುರಿತ ಟೀಕೆಗಳಿಗೆ ಬ್ಯಾಟ್ ಮೂಲಕ ಉತ್ತರ ನೀಡಿ ಅರ್ಧ ಶತಕ ಗಳಿಸಿ, ಔಟ್ ಆದರು.

ಇಶಾನ್ ಕಿಶನ್ 31 ರನ್ ಗೆ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್ ಗೆ ಬಂದ ಸೂರ್ಯ ಕುಮಾರ್ ಯಾದವ್ ತಮ್ಮ ಹಳೇಯ ಲಯಕ್ಕೆ ಮತ್ತೆ ಮರಳಿದರು. 37 ಎಸೆತ ಎದುರಿಸಿದ ಸೂರ್ಯ ಕುಮಾರ್ ಯಾದವ್ 194.59 ಸ್ಟ್ರೈಕ್ ರೇಟ್ ನೊಂದಿಗೆ 72 ರನ್ ಪೇರಿಸಿ ತಂಡವನ್ನು 50 ಓವರ್ ಗಳಲ್ಲಿ 399 ರನ್ ಗಳಿಗೆ ತಲುಪಿಸಿದರು. 6 ಬೌಂಡರಿ 6 ಸಿಕ್ಸ್ ಬಾರಿಸಿದ ಸ್ಪೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಏಕದಿನ ಪಂದ್ಯದಲ್ಲೂ ಟಿ-20 ಪಂದ್ಯದ ರಸದೌತಣ ನೀಡಿದರು.

ಭಾರತದ ಬ್ಯಾಟರ್ ಗಳ ಕೆಂಗಣಿಗೆ ಗುರಿಯಾದ ಆಸ್ಟ್ರೇಲಿಯಾ ಬೌಲರ್ ಗಳು ಮಳೆ ಸುರಿದಿದ್ದ ಕ್ರೀಡಾಂಗಣ ತಂಪಾಗಿದ್ದರೂ ಬೆವರು ಸುರಿಸಿದರು. ಕೇಮ್ರಾನ್ ಗ್ರೀನ್ 2 ವಿಕೆಟ್, ಸೀನ್ ಅಬೋಟ್, ಜೋಶ್ ಹೇಝಲ್ವುಡ್, ಆಡಮ್ ಝಂಪಾ ತಲಾ 1 ವಿಕೆಟ್ ಪಡೆದರು. ಕೇಮ್ರಾನ್ ಗ್ರೀನ್ 10 ಓವರ್ಗಳಲ್ಲಿ 10.3ರ ಸರಾಸರಿಯೊಂದಿಗೆ 103 ರನ್ ನೀಡಿ ದುಬಾರಿ ಎನಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News