ಭಾರತ ವಿರುದ್ಧ ಏಕದಿನ ಸರಣಿ: ಪ್ಯಾಟ್ ಕಮಿನ್ಸ್ ಹೊರಕ್ಕೆ?
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಐದನೇ ಆ್ಯಶಸ್ ಟೆಸ್ಟ್ ಪಂದ್ಯವನ್ನು ಮಣಿಕಟ್ಟು ನೋವಿನೊಂದಿಗೆ ಆಡಿದ್ದ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಭಾರತ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯವು ಕಮಿನ್ಸ್ ಎಡ ಮಣಿಕಟ್ಟಿನ ಗಾಯದ ಗಂಭೀರತೆ ಕುರಿತು ಇನ್ನಷ್ಟೇ ವಿವರ ನೀಡಬೇಕಾಗಿದೆ.
ಮಣಿಕಟ್ಟು ಮುರಿದಿರುವ ಸಾಧ್ಯತೆಯನ್ನು ವೈದ್ಯಕೀಯ ಸಿಬ್ಬಂದಿ ತಳ್ಳಿಹಾಕಿಲ್ಲ ಎಂದು ಈ ವಿಚಾರವನ್ನು ಗೊತ್ತಿರುವ ಎರಡು ಮೂಲಗಳು ತಿಳಿಸಿವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ತಿಳಿಸಿದೆ.
ಕಳೆದ ವಾರ ದಿ ಓವಲ್ನಲ್ಲಿ ನಡೆದ ಅಂತಿಮ ಆ್ಯಶಸ್ ಟೆಸ್ಟ್ನ ಮೊದಲ ದಿನದಂದು ಆಸ್ಟ್ರೇಲಿಯದ ವೇಗದ ಬೌಲರ್ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದರು. ಟೆಸ್ಟ್ ಉಳಿದ ಪಂದ್ಯಗಳನ್ನು ಮಣಿಕಟ್ಟಿಗೆ ಪಟ್ಟಿ ಕಟ್ಟಿಕೊಂಡು ಆಡಿದ್ದರು. ಗಾಯವು ಕಮಿನ್ಸ್ ಬೌಲಿಂಗ್ಗೆ ಅಡ್ಡಿಯಾಗದಿದ್ದರೂ ಬ್ಯಾಟಿಂಗ್ ಮಾಡುವಾಗ ಅವರಿಗೆ ಸಂಕಟ ತಂದಿತು.
ಭಾರತ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸಹಿತ 2 ತಿಂಗಳಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿರುವ ಕಮಿನ್ಸ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಹಾಗೂ ಭಾರತ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯವು ಮುಂದಿನ ವಾರ ತಂಡವನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಕಮಿನ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಮಾರ್ಷ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಆಲ್ರೌಂಡರ್ ಮಾರ್ಷ್ ಆಸ್ಟ್ರೇಲಿಯದ ಟ್ವೆಂಟಿ-20 ನಾಯಕನಾಗಿ ಆಯ್ಕೆಯಾಗುವ ಅಭ್ಯರ್ಥಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯವನ್ನು ಮುನ್ನಡೆಸಿದ್ದರು. ಏಕದಿನ ಸರಣಿಯನ್ನಾಡಲು ಭಾರತಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಆಸ್ಟ್ರೇಲಿಯವು ಆಗಸ್ಟ್ 30ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.