ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿ: ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೆ ವಿಶ್ರಾಂತಿ

Update: 2023-07-27 12:48 GMT

 ಹೊಸದಿಲ್ಲಿ, ಜು.27: ವೆಸ್ಟ್‌ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮೊದಲು ಪಾದದ ನೋವಿನಿಂದ ಬಳಲುತ್ತಿರುವ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಭಾರತ ತಂಡದಿಂದ ಬಿಸಿಸಿಐ ಅವರನ್ನು ಬಿಡುಗಡೆ ಮಾಡಿದೆ.

ಬಲಗೈ ವೇಗದ ಬೌಲರ್ ಸಿರಾಜ್ ಪಾದದ ನೋವಿನಿಂದ ಬಳಲುತ್ತಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿ ನೀಡಲು ಸಲಹೆ ನೀಡಿದೆ. ಬಾರ್ಬಡೋಸ್‌ನಲ್ಲಿ ಗುರುವಾರ ಆರಂಭವಾಗಲಿರುವ ಏಕದಿನ ಸರಣಿಗೆ ಟೀಮ್ ಇಂಡಿಯಾವು 29ರ ಹರೆಯದ ಸಿರಾಜ್ ಸ್ಥಾನಕ್ಕೆ ಬದಲಿ ಆಟಗಾರನಿಗೆ ಬುಲಾವ್ ನೀಡಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಸಿರಾಜ್ ಅವರು ಟೆಸ್ಟ್ ತಂಡದ ಇತರ ಸದಸ್ಯರಾದ ಆರ್.ಅಶ್ವಿನ್, ಕೆ.ಎಸ್. ಭರತ್, ನವದೀಪ್ ಸೈನಿ ಹಾಗೂ ಅಜಿಂಕ್ಯ ರಹಾನೆ ಅವರೊಂದಿಗೆ ವಿಶ್ರಾಂತಿ ಪಡೆದಿದ್ದಾರೆ. ಭಾರತವು 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು.

ಸಿರಾಜ್ ಅನುಪಸ್ಥಿತಿಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿ ಅನುಭವದ ಕೊರತೆ ಎದುರಿಸುತ್ತಿದೆ. ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್, ಉಮ್ರಾನ್ ಮಲ್ಲಿಕ್ ಹಾಗೂ ಮುಕೇಶ್ ಕುಮಾರ್ ಒಟ್ಟಿಗೆ 50 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಶಾರ್ದೂಲ್(35 ಪಂದ್ಯ)ಹೆಚ್ಚು ಪಂದ್ಯಗಳಲ್ಲಿ ಆಡಿದ್ದು, ಮುಕೇಶ್ ಇನ್ನೂ ಅಂತರ್‌ರಾಷ್ಟ್ರೀಯ ಪಂದ್ಯ ಆಡಿಲ್ಲ.

ಸಿರಾಜ್ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ತಂಡದಲ್ಲೂ ಸ್ಥಾನ ಪಡೆದಿಲ್ಲ. ಏಕದಿನ ಸರಣಿಯ ನಂತರ ಐದು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿ ನಡೆಯಲಿದೆ.

ಭಾರತವು ಆಗಸ್ಟ್-ಸೆಪ್ಟಂಬರ್‌ನಲ್ಲಿ ಶ್ರೀಲಂಕಾದಲ್ಲಿ ಏಶ್ಯಕಪ್, ಆ ನಂತರ ಅಕ್ಟೋಬರ್-ನವೆಂಬರ್‌ನಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್‌ನ್ನು ಆಡಲಿದೆ.



Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News