ಏಕದಿನ ರ‍್ಯಾಂಕಿಂಗ್ | ದ್ವಿತೀಯ ಸ್ಥಾನಕ್ಕೇರಿದ ರೋಹಿತ್ ಶರ್ಮಾ
ಹೊಸದಿಲ್ಲಿ : ಇತ್ತೀಚೆಗೆ ಕೊನೆಗೊಂಡಿರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತದ ನಾಯಕ ರೋಹಿತ್ ಶರ್ಮಾ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಭಾರತವು ಸರಣಿಯನ್ನು 0-2ರಿಂದ ಸೋತಿದ್ದರೂ ರೋಹಿತ್ ಅವರು 3 ಪಂದ್ಯಗಳ ಸರಣಿಯಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 157 ರನ್ ಗಳಿಸಿದ್ದರು.
ರ‍್ಯಾಂಕಿಂಗ್‌ನಲ್ಲಿ ಶುಭಮನ್ ಗಿಲ್ 3ನೇ ಸ್ಥಾನಕ್ಕೆ ಕುಸಿದರೆ, ವಿರಾಟ್ ಕೊಹ್ಲಿ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಬ್ಯಾಟರ್ ಬಾಬರ್ ಆಝಮ್ 824 ಪಾಯಿಂಟ್ಸ್‌ನೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರೋಹಿತ್ 765 ಪಾಯಿಂಟ್ಸ್ ಹೊಂದಿದ್ದಾರೆ.
ಶ್ರೇಯಸ್ ಅಯ್ಯರ್ 16ನೇ ಸ್ಥಾನದಲ್ಲಿದ್ದರೆ, ಕೆ.ಎಲ್.ರಾಹುಲ್ 21ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 4ನೇ ಸ್ಥಾನ ಪಡೆದು ಗರಿಷ್ಠ ರ್ಯಾಂಕಿನ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಜಸ್‌ಪ್ರಿತ್ ಬುಮ್ರಾ 8ನೇ ಸ್ಥಾನದಲ್ಲಿದ್ದಾರೆ. ಮುಹಮ್ಮದ್ ಸಿರಾಜ್ 5 ಸ್ಥಾನ ಕಳೆದುಕೊಂಡು ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್‌ರೊಂದಿಗೆ 9ನೇ ಸ್ಥಾನ ಹಂಚಿಕೊಂಡಿದ್ದಾರೆ.
ಭಾರತವು ಏಕದಿನ ರ‍್ಯಾಂಕಿಂಗ್‌ನಲ್ಲಿ 118 ಪಾಯಿಂಟ್ಸ್‌ನೊಂದಿಗೆ ಅಗ್ರ ಸ್ಥಾನದಲ್ಲಿದೆ. ಆಸ್ಟ್ರೇಲಿಯ(116)ಹಾಗೂ ದಕ್ಷಿಣ ಆಫ್ರಿಕಾ(112 ) ತಂಡಗಳು ಆ ನಂತರದ ಸ್ಥಾನದಲ್ಲಿವೆ.