ಏಕದಿನ ರ್ಯಾಂಕಿಂಗ್: ನಂ.1 ಸ್ಥಾನದತ್ತ ಶುಭಮನ್ ಗಿಲ್

Update: 2023-10-25 18:14 GMT

Photo: twitter.com/CricCrazyJohns

ಹೊಸದಿಲ್ಲಿ: ಭಾರತದ ಸ್ಟಾರ್ ಓಪನರ್ ಶುಭಮನ್ ಗಿಲ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್‌ ನಲ್ಲಿ ವಿಶ್ವದ ನಂ.1 ಬ್ಯಾಟರ್ ಆಗುವುದಕ್ಕೆ ಸಮೀಪದಲ್ಲಿದ್ದಾರೆ. ಸದ್ಯ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಬ್ಯಾಟರ್ ಬಾಬರ್ ಆಝಮ್‌ ಗಿಂತ 6 ಅಂಕದಿಂದ ಹಿಂದಿದ್ದಾರೆ.

ಪಾಕ್ ನಾಯಕ ಬಾಬರ್ ಒಟ್ಟು 829 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದು, ಗಿಲ್(823 ಅಂಕ) ನಂತರದ ಸ್ಥಾನದಲ್ಲಿದ್ದಾರೆ.

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಬಾಬರ್ ಐದು ಪಂದ್ಯಗಳಲ್ಲಿ ಕೇವಲ 157 ರನ್ ಗಳಿಸಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಆರಂಭದ ಕೆಲವು ಪಂದ್ಯಗಳಿಂದ ವಂಚಿತರಾಗಿದ್ದ ಗಿಲ್ 3 ಪಂದ್ಯಗಳಲ್ಲಿ 95 ರನ್ ಗಳಿಸಿದ್ದಾರೆ.

ನಂ.1 ರ್ಯಾಂಕಿಂಗ್‌ ನತ್ತ ಗಿಲ್ ಮಾತ್ರವಲ್ಲ ಕ್ವಿಂಟನ್ ಡಿಕಾಕ್ ಕೂಡ ಕಣ್ಣು ನೆಟ್ಟಿದ್ದಾರೆ. ಫಾರ್ಮ್‌ ನಲ್ಲಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಸದ್ಯ ಐಸಿಸಿ ರ್ಯಾಂಕಿಂಗ್‌ ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿರುವ ಡಿಕಾಕ್ ಈಗಾಗಲೇ ಆರಂಭಿಕ ಆಟಗಾರನಾಗಿ ಮೂರು ಶತಕಗಳನ್ನು ಸಿಡಿಸಿದ್ದಾರೆ.

ಡಿಕಾಕ್ ಅವರ ಸಹ ಆಟಗಾರ ಹೆನ್ರಿಕ್ ಕ್ಲಾಸೆನ್ ಏಳು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನ ತಲುಪಿದ್ದಾರೆ. ಜೀವನಶ್ರೇಷ್ಠ ಪಾಯಿಂಟ್ಸ್ ಗಿಟ್ಟಿಸಿದ್ದಾರೆ.

ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅನುಭವಿ ಜೋಡಿ ವಿರಾಟ್ ಕೊಹ್ಲಿ(3 ಸ್ಥಾನ ಭಡ್ತಿ) ಹಾಗೂ ಡೇವಿಡ್ ವಾರ್ನರ್(2 ಸ್ಥಾನ ಭಡ್ತಿ)ರ್ಯಾಂಕಿಂಗ್‌ ನಲ್ಲಿ 5ನೇ ಸ್ಥಾನ ಹಂಚಿಕೊಂಡಿದ್ದಾರೆ.

ನ್ಯೂಝಿಲ್ಯಾಂಡಿನ ಮಧ್ಯಮ ಸರದಿಯ ಬ್ಯಾಟರ್ ಡ್ಯಾರಿಲ್ ಮಿಷೆಲ್ ವಿಶ್ವಕಪ್‌ ನಲ್ಲಿ 4 ಇನಿಂಗ್ಸ್‌ ನಲ್ಲಿ 268 ರನ್ ಗಳಿಸಿದ ನಂತರ 16 ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ತಲುಪಿದ್ದಾರೆ.

ಬೌಲಿಂಗ್ ರ್ಯಾಂಕಿಂಗ್‌ ನಲ್ಲಿ ಆಸ್ಟ್ರೇಲಿಯದ ವೇಗಿ ಜೋಶ್ ಹೇಝಲ್‌ ವುಡ್‌ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ವಿಶ್ವಕಪ್‌ ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಒಟ್ಟು 6 ವಿಕೆಟ್‌ ಗಳನ್ನು ಕಬಳಿಸಿರುವ ಭಾರತದ ವೇಗಿ ಮುಹಮ್ಮದ್ ಸಿರಾಜ್ ಒಂದು ಸ್ಥಾನ ಮೇಲಕ್ಕೇರಿ ಇದೀಗ ಹೇಝಲ್‌ ವುಡ್‌ ಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಎರಡು ಸ್ಥಾನ ಮೇಲಕ್ಕೇರಿ 3ನೇ ಸ್ಥಾನ ತಲುಪಿದ್ದಾರೆ. ಇದೀಗ ಟೂರ್ನಮೆಂಟ್‌ ನಲ್ಲಿ 7 ವಿಕೆಟ್‌ ಕಬಳಿಸಿರುವ ಕೇಶವ್ ಜೀವನಶ್ರೇಷ್ಠ ಪಾಯಿಂಟ್ಸ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News