ಪಾಕ್ ಭಾರತದಲ್ಲಿ ಆಡುವುದು, ಭಾರತ ಪಾಕ್ ನಲ್ಲಿ ಆಡದಿರುವುದು ಸ್ವೀಕಾರಾರ್ಹವಲ್ಲ : ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ

Update: 2024-11-28 16:09 GMT

ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ | PC : PTI  

ಲಾಹೋರ್ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸುವ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ಮುಹ್ಸಿನ್ ನಖ್ವಿ ಬುಧವಾರ ಹೇಳಿದ್ದಾರೆ.

ಇಲ್ಲಿನ ಗದ್ದಾಫಿ ಸ್ಟೇಡಿಯಮ್ನಲ್ಲಿ ಬುಧವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಭಾರತದಲ್ಲಿ ಆಡುವುದು ಮತ್ತು ಪಾಕಿಸ್ತಾನದಲ್ಲಿ ಆಡಲು ಭಾರತವು ನಿರಾಕರಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಭಾರತದಂತೆಯೇ ಪಾಕಿಸ್ತಾನವನ್ನೂ ನ್ಯಾಯೋಚಿತವಾಗಿ ನಡೆಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

‘‘ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಪಾಕಿಸ್ತಾನ ಕ್ರಿಕೆಟ್ಗೆ ಯಾವುದು ಉತ್ತಮವೋ ಅದನ್ನು ನಾವು ಮಾಡುತ್ತೇವೆ ಎನ್ನುವ ಭರವಸೆಯನ್ನು ನಾನು ನೀಡುತ್ತೇನೆ. ನಾನು ಐಸಿಸಿ ಅಧ್ಯಕ್ಷರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ನನ್ನ ತಂಡವು ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ನಾವು ಭಾರತದಲ್ಲಿ ಕ್ರಿಕೆಟ್ ಆಡಬೇಕು, ಆದರೆ ಅವರು ಇಲ್ಲಿ ಕ್ರಿಕೆಟ್ ಆಡುವುದಿಲ್ಲ ಎನ್ನುವುದು ನಮಗೆ ಸ್ವೀಕಾರಾರ್ಹವಲ್ಲ ಎನ್ನುವ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಏನು ನಡೆಯುತ್ತದೆಯೋ ಅದು ಸಮಾನತೆಯ ಆಧಾರದಲ್ಲಿ ನಡೆಯುತ್ತದೆ. ನಾವು ಇದನ್ನು ಐಸಿಸಿಗೆ ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇವೆ ಹಾಗೂ ಮುಂದೆ ಏನು ನಡೆಯುತ್ತದೆ ಎನ್ನುವುದನ್ನು ನಾವು ನಿಮಗೆ ತಿಳಿಸುತ್ತೇವೆ’’ ಎಂದು ನಖ್ವಿ ಹೇಳಿದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಧ್ಯವಾಗುವುದಿಲ್ಲ ಎಂಬುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಇತ್ತೀಚೆಗೆ ಐಸಿಸಿಗೆ ಹೇಳಿತ್ತು. ಸರಕಾರದ ಅನುಮೋದನೆ ಸಿಗದಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News