ಚಾಂಪಿಯನ್ಸ್ ಟ್ರೋಫಿ ಪಾಕ್ ನಿಂದ ಹೊರಹೋಗುವುದೇ?
ಹೊಸದಿಲ್ಲಿ : ಪಾಕಿಸ್ತಾನದಲ್ಲಿ ಹೊಸದಾಗಿ ತಲೆದೋರಿರುವ ರಾಜಕೀಯ ಅಶಾಂತಿಯ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಆ ದೇಶದಿಂದ ಸಂಪೂರ್ಣವಾಗಿ ಹೊರಹೋಗುವ ಪ್ರಮೇಯ ಎದುರಾಗಿದೆ. ಪ್ರಸಕ್ತ ರಾಜಕೀಯ ಅಶಾಂತಿಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಎ ತಂಡವು ತನ್ನ ಬಿಳಿ ಚೆಂಡಿನ (ಸೀಮಿತ ಓವರ್ಗಳ) ಸರಣಿಯನ್ನು ಕಡಿತಗೊಳಿಸಲು ನಿರ್ಧರಿಸಿದೆ.
2025ರ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ನಿರ್ಧರಿಸಲು ನಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಆನ್ಲೈನ್ ಸಭೆಯ ಒಂದು ದಿನ ಮುನ್ನ ಈ ಬೆಳವಣಿಗೆ ನಡೆದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಇತರ ಕೆಲವು ದೇಶಗಳೂ ಪಾಕಿಸ್ತಾನದಲ್ಲಿ ನೆಲೆಸಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಳಿಕ ಪಂದ್ಯಾವಳಿಯು ಆ ದೇಶದಿಂದ ಹೊರಹೋಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾಗಿ, ಹೈಬ್ರಿಡ್ ಮಾದರಿಯಲ್ಲಿ (ಕೆಲವು ಪಂದ್ಯಗಳನ್ನು ಹೊರದೇಶಗಳಲ್ಲಿ ನಡೆಸುವುದು) ಪಂದ್ಯಾವಳಿಯನ್ನು ಏರ್ಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಒಪ್ಪುವ ಸಾಧ್ಯತೆ ಎಂಬುದಾಗಿ ಭಾವಿಸಲಾಗಿದೆ.
‘‘ಇತರ ಕೆಲವು ಕ್ರಿಕೆಟ್ ಮಂಡಳಿಗಳೂ ಕಳವಳ ವ್ಯಕ್ತಪಡಿಸಿವೆ. ಹಾಗಾಗಿ, ಹೈಬ್ರಿಡ್ ಮಾದರಿಗೆ ಪಿಸಿಬಿ ಒಪ್ಪುವ ಸಾಧ್ಯತೆಯಿದೆ’’ ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ.
ದೇಶದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟನ್ನು ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆಗೆ ಮಂಗಳವಾರ ದೊಡ್ಡ ಹೊಡೆತ ಬಿದ್ದಿದೆ. ದೇಶದ ರಾಜಧಾನಿ ವಲಯದಲ್ಲಿ ಪ್ರಸಕ್ತ ನೆಲೆಸಿರುವ ಸಾಮಾಜಿಕ-ರಾಜಕೀಯ ಅಶಾಂತಿಯಿಂದಾಗಿ ಪಾಕಿಸ್ತಾನ ಎ ತಂಡದ ವಿರುದ್ಧದ ಇನ್ನುಳಿದಿರುವ ಎರಡು 50 ಓವರ್ಗಳ ಪಂದ್ಯಗಳನ್ನು ಆಡದಿರಲು ಪ್ರವಾಸಿ ಶ್ರೀಲಂಕಾ ಎ ತಂಡ ನಿರ್ಧರಿಸಿದೆ.
1996ರ ಬಳಿಕ, ಪಾಕಿಸ್ತಾನದಲ್ಲಿ ಮೊದಲ ಐಸಿಸಿ ಪಂದ್ಯಾವಳಿಯೊಂದರ ಆತಿಥ್ಯ ವಹಿಸುವುದನ್ನು ಪಿಸಿಬಿ ಎದುರು ನೋಡುತ್ತಿತ್ತು. ಆದರೆ ಈ ಬೆಳವಣಿಗೆ ಬಳಿಕ ಆ ಸಾಧ್ಯತೆ ಮಸುಕಾಗಿರುವಂತೆ ಕಂಡುಬರುತ್ತಿದೆ. ಈಗ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ರ ಅಸಂಖ್ಯಾತ ಬೆಂಬಲಿಗರು ರಾಜಧಾನಿ ಇಸ್ಲಾಮಾಬಾದ್ಗೆ ಮುತ್ತಿಗೆ ಹಾಕಿದ್ದಾರೆ ಮತ್ತು ಹೆಚ್ಚಿನವರು ರಾಜಧಾನಿಯನ್ನು ಪ್ರವೇಶಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗದಿರುವ ನಿರ್ಧಾರವನ್ನು ಭಾರತವು ಈಗಾಗಲೇ ತೆಗೆದುಕೊಂಡಿದೆ. ಹಾಗಾಗಿ, ಪಂದ್ಯಾವಳಿಯು ಆ ದೇಶದಲ್ಲಿ ನಡೆಯುವ ಸಾಧ್ಯತೆಯು ಅನಿಶ್ಚಿತವಾಗಿತ್ತು. ಈಗ ಆ ದೇಶದಲ್ಲಿ ತಲೆದೋರಿರುವ ರಾಜಕೀಯ ಅಶಾಂತಿಯ ಹಿನ್ನೆಲೆಯಲ್ಲಿ, ಚಾಂಪಿಯನ್ಸ್ ಟ್ರೋಫಿಯು ಆ ದೇಶದಿಂದ ಹೊರಗೆ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಮುಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನಡೆಯಲಿದೆ. ಪಂದ್ಯಾವಳಿಯು ಪಾಕಿಸ್ತಾನದಲ್ಲಿ ನಡೆಯುವುದೆಂದು ನಿಗದಿಯಾಗಿದೆ.