ಬ್ರಿಟನ್ ಬಾಕ್ಸಿಂಗ್ ಪಂದ್ಯಾವಳಿಯಿಂದ ಹಿಂದೆ ಸರಿದ ತೈವಾನ್ ಮಹಿಳಾ ಬಾಕ್ಸರ್ | ಲಿಂಗದ ಬಗ್ಗೆ ಎದ್ದ ವಿವಾದ
ತೈಪೆ (ತೈವಾನ್) : ಲಿಂಗದ ಬಗ್ಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಮಹಿಳಾ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಲಿನ್ ಯು-ಟಿಂಗ್ ಬ್ರಿಟನ್ ನಲ್ಲಿ ನಡೆಯಲಿರುವ ಪಂದ್ಯಾವಳಿಯೊಂದರಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ತೈವಾನ್ ಕ್ರೀಡೆಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಲಿನ್ ಮತ್ತು ಅಲ್ಜೀರಿಯದ ಬಾಕ್ಸರ್ ಇಮೇನ್ ಖಲೀಫ್ರ ಲಿಂಗದ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದವು. ಅವರಿಗೆ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಒಲಿಂಪಿಕ್ ಆಡಳಿತ ಮಂಡಳಿಯು ಅವಕಾಶ ಮಾಡಿಕೊಟ್ಟಿತ್ತು. ಜುಲೈ ಮತ್ತು ಆಗಸ್ಟ್ನಲ್ಲಿ ನಡೆದ ಒಲಿಂಪಿಕ್ಸ್ ನ ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಲಿನ್ ಚಿನ್ನದ ಪದಕ ಗೆದ್ದಿದ್ದಾರೆ.
ಬ್ರಿಟನ್ ನ ಶೆಫೀಲ್ಡ್ನಲ್ಲಿ ಬುಧವಾರ ಆರಂಭಗೊಂಡ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ನಲ್ಲಿ ಲಿನ್ ಸ್ಪರ್ಧಿಸಬೇಕಾಗಿತ್ತು. ಅದು ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಲಿನ್ರ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಾಗುತ್ತಿತ್ತು. ಆದರೆ, ಅವರ ಅರ್ಹತೆಯನ್ನು ವರ್ಲ್ಡ್ ಬಾಕ್ಸಿಂಗ್ ಪ್ರಶ್ನಿಸಿದ ಬಳಿಕ, ಅವರು ಸ್ಪರ್ಧೆಯಿಂದ ಹಿಂದೆ ಸರಿದರು ಎಂದು ತೈವಾನ್ ನ ಕ್ರೀಡಾ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಅವರು ಮಹಿಳೆಯಾಗಿದ್ದಾರೆ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ. ಅದೂ ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಾರೆ ಮತ್ತು ಚಿನ್ನವನ್ನೂ ಗೆದ್ದಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.
‘‘ದುರದೃಷ್ಟವಷಾತ್, ವರ್ಲ್ಡ್ ಬಾಕ್ಸಿಂಗ್ ನೂತನವಾಗಿ ಸ್ಥಾಪನೆಯಾಗಿರುವ ಸಂಸ್ಥೆಯಾಗಿದ್ದು, ಇನ್ನೂ ತನ್ನ ಕಾರ್ಯವಿಧಾನವನ್ನು ರೂಪಿಸಿಕೊಂಡಿಲ್ಲ. ಅತ್ಲೀಟ್ಗಳ ಹಕ್ಕುಗಳನ್ನು ರಕ್ಷಿಸುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿಗಳನ್ನು ಅಳವಡಿಸಿಕೊಂಡಿಲ್ಲ’’ ಎಂದು ಅದು ಹೇಳಿದೆ.
ಬ್ರಿಟನ್ ನಲ್ಲಿ ‘‘ಸಮಗ್ರ ವೈದ್ಯಕೀಯ ತಪಾಸಣೆ’’ಗೆ ಒಳಗಾಗುವುದಾಗಿ ಲಿನ್ ಹೇಳಿದ್ದರೂ, ವರ್ಲ್ಡ್ ಬಾಕ್ಸಿಂಗ್ ಅದಕ್ಕೆ ಒಪ್ಪಿಲ್ಲ ಎಂದು ಹೇಳಿಕೆ ತಿಳಿಸಿದೆ.