ನಾಳೆಯಿಂದ ಪ್ಯಾರಾಲಿಂಪಿಕ್ಸ್ ಗೇಮ್ಸ್ ಆರಂಭ : ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿ ಭಾರತ

Update: 2024-08-27 16:02 GMT

PC : PTI

ಪ್ಯಾರಿಸ್ : ಇದೇ ಮೊದಲ ಬಾರಿ ಅತ್ಯಂತ ಹೆಚ್ಚು 84 ಪ್ಯಾರಾ ಕ್ರೀಡಾಪಟುಗಳನ್ನು ಪ್ಯಾರಿಸ್ ಪ್ಯಾರಾಂಪಿಕ್ಸ್‌ ಗೆ ಕಳುಹಿಸಿಕೊಟ್ಟಿರುವ ಭಾರತವು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಬುಧವಾರದಿಂದ ಆರಂಭವಾಗಿ ಸೆಪ್ಟಂಬರ್ 8ರ ತನಕ ನಡೆಯಲಿರುವ 17ನೇ ಆವೃತ್ತಿಯ ಗೇಮ್ಸ್‌ ನಲ್ಲಿ 22 ಕ್ರೀಡೆಗಳಲ್ಲಿ 549 ಸ್ಪರ್ಧೆಗಳು ನಡೆಯಲಿವೆ. ಭಾರತದ ಪ್ಯಾರಾಲಿಂಪಿಕ್ಸ್ ತಂಡದಲ್ಲಿ ಯುವಕರು ಹಾಗೂ ಅನುಭವಿಗಳ ಮಿಶ್ರಣವಿದ್ದು, 32 ಮಹಿಳೆಯರು ಭಾಗವಹಿಸುತ್ತಿದ್ದಾರೆ. ಟೋಕಿಯೊ ಗೇಮ್ಸ್‌ನಲ್ಲಿ 14 ಮಹಿಳೆಯರ ಸಹಿತ ಒಟ್ಟು 54 ಅಥ್ಲೀಟ್‌ಗಳು ಭಾಗವಹಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಗೇಮ್ಸ್‌ ನಲ್ಲಿ ಸ್ಪರ್ಧಿಸಲಿರುವ ಭಾರತದ ಅಥ್ಲೀಟ್‌ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಭಾರತೀಯ ತಂಡ ಹೊಸತಾಗಿ ಪರಿಚಯಿಸಿರುವ ಪ್ಯಾರಾ ಸೈಕ್ಲಿಂಗ್, ಪ್ಯಾರಾ ರೋವಿಂಗ್ ಹಾಗೂ ಬ್ಲೈಂಡ್ ಜುಡೊ ಸಹಿತ ಒಟ್ಟು 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ.

ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಐದು ಚಿನ್ನದ ಪದಕ ಸಹಿತ 19 ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿತ್ತು. ರ್ಯಾಂ ಕಿಂಗ್‌ ನಲ್ಲಿ ಒಟ್ಟಾರೆ 24ನೇ ಸ್ಥಾನ ಪಡೆದಿತ್ತು. ಮೂರು ವರ್ಷಗಳ ನಂತರ ಚಿನ್ನದ ಗಳಿಕೆಯಲ್ಲಿ ಎರಡಂಕೆಯ ದಾಟುವ ಜೊತೆಗೆ 25ಕ್ಕೂ ಅಧಿಕ ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.

ಕಳೆದ ವರ್ಷ ನಡೆದಿದ್ದ ಹಾಂಗ್‌ಝೌ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 29 ಚಿನ್ನ ಸಹಿತ 111 ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿತ್ತು. ಆ ನಂತರ ಮೇನಲ್ಲಿ ನಡೆದಿದ್ದ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿತ್ತು. ಆರು ಚಿನ್ನ ಸಹಿತ ಒಟ್ಟು 17 ಪದಕಗಳನ್ನು ಜಯಿಸಿದ್ದ ಭಾರತವು ಪದಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿತ್ತು.

ಭಾರತದ ಪರ ಪ್ಯಾರಾ ಅತ್ಲೆಟಿಕ್ಸ್ ತಂಡ ಈ ಹಿಂದೆ ಹೆಚ್ಚಿನ ಪದಕಗಳನ್ನು ಜಯಿಸಿದ್ದು ಈ ಬಾರಿಯೂ ಶ್ರೇಷ್ಠ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಅತ್ಲೆಟಿಕ್ಸ್ ತಂಡದಲ್ಲಿ 38 ಸ್ಪರ್ಧಿಳು ಇರಲಿದ್ದಾರೆ. ಆರ್ಚರಿ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜುಡೋ, ಪ್ಯಾರಾಕೆನೋಯಿಂಗ್, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆಕ್ವಾಂಡೊ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಭಾರತವು ಪ್ಯಾರಾಲಿಂಪಿಕ್ಸ್‌ ನಲ್ಲಿ ಈ ತನಕ ಒಟ್ಟು 9 ಚಿನ್ನ, 12 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ ಒಟ್ಟು 31 ಪದಕಗಳನ್ನು ಜಯಿಸಿದ್ದು, ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಮೂಲಕ ಪದಕ ಗಳಿಕೆಯಲ್ಲಿ ಅರ್ಧಶತಕ ಗಡಿ ದಾಟುವ ಉತ್ಸಾಹದಲ್ಲಿದೆ.

ಇದೇ ಮೊದಲ ಬಾರಿ ಭಾರತವು ಪ್ಯಾರಾಲಿಂಪಿಕ್ಸ್‌ ನಲ್ಲಿ ತನ್ನ ಕ್ರೀಡಾಪಟುಗಳನ್ನು 12 ಕ್ರೀಡೆಗಳಲ್ಲಿ ಕಣಕ್ಕಿಳಿಸುತ್ತಿದೆ. ಈ ಬಾರಿ ಕನಿಷ್ಠ 25ರಿಂದ 30 ಪದಕಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಕೇಂದ್ರ ಸರಕಾರ ಎಲ್ಲ ರೀತಿಯ ನೆರವು ಒದಗಿಸುತ್ತಿದೆ. ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಈ ಬಾರಿ ನಮ್ಮಿಂದ ಹಲವು ದಾಖಲೆಗಳು ನಿರ್ಮಾಣವಾಗಲಿದೆ ಎನ್ನುವ ನಂಬಿಕೆ ಇದೆ ಎಂದು ಪಿಸಿಐನ ಪ್ರಧಾನ ಕೋಚ್ ಆಗಿರುವ ಕರ್ನಾಟಕದ ಸತ್ಯನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

►1984ರಿಂದ ನಿರಂತರ ಸ್ಪರ್ಧೆ

1968ರಲ್ಲಿ ಸಮ್ಮರ್ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತದ ಕ್ರೀಡಾಪಟುಗಳು ಮೊದಲ ಬಾರಿ ಸ್ಪರ್ಧಿಸಿದ್ದರೂ 1984ರಿಂದ ಪ್ರತಿಯೊಂದು ಪ್ಯಾರಾಲಿಂಪಿಕ್ಸ್ ಗೇಮ್ಸ್‌ ನಲ್ಲಿ ಭಾಗವಹಿಸುತ್ತಿದ್ದಾರೆ. 2021ರ ಟೋಕಿಯೊ ಗೇಮ್ಸ್‌ ನಲ್ಲಿ ಐದು ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸಹಿತ ಒಟ್ಟು 19 ಪದಕಗಳನ್ನು ಜಯಿಸಿದ್ದ ಭಾರತವು ಯಶಸ್ವಿ ಅಭಿಯಾನ ಕೈಗೊಂಡಿತ್ತು. ಟೋಕಿಯೊ ಗೇಮ್ಸ್‌ ಗಿಂತ ಮೊದಲು ಭಾರತವು ಹಿಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಕೇವಲ 12 ಪದಕಗಳನ್ನು ಜಯಿಸಲಷ್ಟೇ ಶಕ್ತವಾಗಿತ್ತು.

ಭಾರತದ ಮೊತ್ತ ಮೊದಲ ಪ್ಯಾರಾಲಿಂಪಿಕ್ಸ್ ಪದಕವು 1972ರ ಗೇಮ್ಸ್‌ನಲ್ಲಿ ಬಂದಿತ್ತು. ಆಗ ಮುರಳಿಕಾಂತ ಪೇಟ್ಕರ್ ಅವರು 50 ಮೀ.ಫ್ರೀಸ್ಟೈಲ್ 3 ಸ್ಪರ್ಧೆಯಲ್ಲಿ ವಿಶ್ವ ದಾಖಲೆಯ ಸಮಯ 37.33 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದ್ದರು.

ಈ ಬಾರಿಯ ಪ್ಯಾರಿಸ್ ಗೇಮ್ಸ್‌ ನಲ್ಲಿ ಭಾಗವಹಿಸುತ್ತಿರುವ 84 ಅಥ್ಲೀಟ್‌ಗಳ ಪೈಕಿ 50 ಮಂದಿ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ ಸ್ಕೀಮ್(ಟಾಪ್ಸ್)ಪಟ್ಟಿಯಲ್ಲಿದ್ದಾರೆ.

ಹಾಲಿ ಪ್ಯಾರಾಲಿಂಪಿಕ್ಸ್ ಹಾಗೂ ವರ್ಲ್ಡ್ ಚಾಂಪಿಯನ್ ಪ್ರಮೋದ್ ಭಗತ್ ಬಿಡಬ್ಲ್ಯುಎಫ್‌ನ ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅಮಾನತುಗೊಂಡಿದ್ದು ಈ ಬಾರಿಯ ಗೇಮ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಈ ವರ್ಷ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನ ಜಯಿಸಿದ್ದ ಎಕ್ತಾ ಭ್ಯಾನ್, ಪ್ಯಾರಿಸ್ ಗೇಮ್ಸ್‌ ಗೆ ಲಭ್ಯವಿಲ್ಲ. ಅವರು ಸ್ಪರ್ಧಿಸುತ್ತಿರುವ ಮಹಿಳೆಯರ ಕ್ಲಬ್ ಥ್ರೋ ಸ್ಪರ್ಧೆಯು ಪ್ಯಾರಾಲಿಂಪಿಕ್ಸ್‌ನಲ್ಲಿ ಇಲ್ಲ.

►ಅವನಿ, ಸುಮಿತ್‌ರತ್ತ ಎಲ್ಲರ ಚಿತ್ತ

ಟೋಕಿಯೊದಲ್ಲಿ ಶೂಟಿಂಗ್‌ನಲ್ಲಿ ಮೊದಲ ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನ ಜಯಿಸಿ ಇತಿಹಾಸ ನಿರ್ಮಿಸಿದ್ದ ರಾಜಸ್ಥಾನದ ರೈಫಲ್ ಶೂಟರ್ ಅವನಿ ಲೇಖರ ಪ್ಯಾರಿಸ್‌ನಲ್ಲಿ ಅಮೋಘ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

22ರ ಹರೆಯದ ಅವನಿ ಪ್ಯಾರಿಸ್‌ನಲ್ಲಿ ಮಹಿಳೆಯರ 10 ಮೀ.ಏರ್‌ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಸ್‌1, ಮಿಕ್ಸೆಡ್ 10 ಮೀ.ಏರ್ ರೈಫಲ್ ಪ್ರೋನ್ ಎಸ್‌ಎಚ್‌1 ಹಾಗೂ ಮಹಿಳೆಯರ 50 ಮೀ. 3 ಪೊಸಿಶನ್ಸ್ ರೈಫಲ್ ಎಸ್‌ಎಚ್‌1ರಲ್ಲಿ ಸ್ಪರ್ಧಿಸಲಿದ್ದಾರೆ.

ಟೋಕಿಯೊ ಗೇಮ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿರುವ ಇನ್ನೋರ್ವ ಅಥ್ಲೀಟ್ ಸುಮಿತ್ ಅಂತಿಲ್ ಪುರುಷರ ಎಫ್‌64 ಜಾವೆಲಿನ್ ಎಸೆತದಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ.

ಟೋಕಿಯೊ ಗೇಮ್ಸ್‌ ನಲ್ಲಿ ಟೇಬಲ್ ಟೆನಿಸ್‌ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದ ಸ್ಟಾರ್ ಆಟಗಾರ್ತಿ ಭಾವನಾ ಪಟೇಲ್ ಕೂಡ ಪ್ಯಾರಿಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಪ್ಯಾರಾ ಸೈಕ್ಲಿಂಗ್‌ನಲ್ಲಿ ಅರ್ಷದ್ ಶೇಕ್, ಬ್ಲೈಂಡ್ ಜುಡೊದಲ್ಲಿ ಕಪಿಲ್ ಪಾರ್ಮರ್ ಹಾಗೂ ಪ್ಯಾರಾ ರೋವಿಂಗ್‌ನಲ್ಲಿ ಅನಿತಾ ಸ್ಪರ್ಧಿಸಲಿದ್ದಾರೆ.

ರುದ್ರಾಂಶ್ ಖಂಡೇಲ್‌ವಾಲ್, ಮನಿಶ್ ನರ್ವಾಲ್ ಹಾಗೂ ನಿಹಾಲ್ ಸಿಂಗ್ ಕ್ರಮವಾಗಿ ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್‌1 ಹಾಗೂ ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್‌ಎಚ್‌1 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಐವರು ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ಗಳ ಪೈಕಿ ನಾಲ್ವರು ಪ್ಯಾರಿಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇವರಲ್ಲಿ ಶೂಟರ್‌ ಗಳಾದ ಅವನಿ ಲೇಖರ ಹಾಗೂ ನರ್ವಾಲ್, ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್ ಹಾಗೂ ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ಅವರಿದ್ದಾರೆ.

►ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಯತಿರಾಜ್, ತಂಗವೇಲು

ವಿಶ್ವದ ನಂ.1 ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಪ್ಯಾರಿಸ್‌ನಲ್ಲಿ ಪುರುಷರ ಸಿಂಗಲ್ಸ್ ಎಸ್‌ಎಲ್‌3 ಹಾಗೂ ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಕನ್ನಡಿಗ ಯತಿರಾಜ್ ಪ್ಯಾರಿಸ್‌ನಲ್ಲಿ ಮತ್ತೊಂದು ಪದಕ ಗೆಲ್ಲಬಲ್ಲ ಫೇವರಿಟ್ ಆಟಗಾರನಾಗಿದ್ದಾರೆ.

ಎರಡು ಬಾರಿಯ ಪ್ಯಾರಾಲಿಂಪಿಕ್ಸ್ ಮೆಡಲಿಸ್ಟ್ ಮರಿಯಪ್ಪನ್ ತಂಗವೇಲು 2016ರ ರಿಯೊ ಗೇಮ್ಸ್‌ ನಲ್ಲಿ ನೀಡಿರುವ ಪ್ರದರ್ಶನ ಪುನರಾವರ್ತಿಸಲು ಬಯಸಿದ್ದಾರೆ. ರಿಯೊ ಗೇಮ್ಸ್‌ ನಲ್ಲಿ ಪುರುಷರ ಹೈಜಂಪ್ ಟಿ-42 ಸ್ಪರ್ಧೆಯಲ್ಲಿ ಮರಿಯಪ್ಪನ್ ಚಿನ್ನದ ಪದಕ ಜಯಿಸಿದ್ದರು.

ಟೋಕಿಯೊ ಗೇಮ್ಸ್‌ ನಲ್ಲಿ ತಂಗವೇಲು ಪುರುಷರ ಹೈಜಂಪ್ ಟಿ-63ರಲ್ಲಿ ಬೆಳ್ಳಿ ಜಯಿಸಿದ್ದರು. ಅವರ ಸಹ ಆಟಗಾರ ಶರದ್ ಕುಮಾರ್ ಕಂಚು ಜಯಿಸಿದ್ದರು.

ಈ ವರ್ಷ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಹೈಜಂಪ್ ಟಿ-63 ಫೈನಲ್‌ನಲ್ಲಿ 1.88 ಮೀ. ಸಾಧನೆಯೊಂದಿಗೆ ಚಾಂಪಿಯನ್‌ಶಿಪ್‌ನ ದಾಖಲೆ ಮುರಿದು ಚಿನ್ನದ ಪದಕ ಜಯಿಸಿ ತನ್ನ ಫಾರ್ಮ್‌ನ್ನು ಮರಳಿ ಪಡೆದಿದ್ದಾರೆ.

ಭಾರತದ ಪ್ಯಾರಾ ಟೇಬಲ್ ಟೆನಿಸ್ ಅಭಿಯಾನಕ್ಕೆ ಭಾವನಾಬೆನ್ ಪಟೇಲ್ ಹಾಗೂ ಸೊನಾಲ್‌ಬೆನ್ ಪಟೇಲ್ ನೇತೃತ್ವವಹಿಸಿದ್ದಾರೆ. 37ರ ಹರೆಯದ ಭಾವನಾಬೆನ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಬೆಳ್ಳಿ ಜಯಿಸಿದ್ದರು. ಆ ನಂತರ 2022ರ ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಚಿನ್ನ ಹಾಗೂ 2022ರ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

►ಪದಕದ ಭರವಸೆ ಮೂಡಿಸಿರುವ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್‌ದೇವಿ

ಎಲ್ಲರ ಕಣ್ಣು 17ರ ಹರೆಯದ ಬಿಲ್ಲುಗಾರ್ತಿ ಶೀತಲ್ ದೇವಿ ಮೇಲೆ ನೆಟ್ಟಿದೆ. ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ ನಲ್ಲಿ ಕಾಣಿಸಿಕೊಳ್ಳಲಿರುವ ಶೀತಲ್ ಅವರು ಮಹಿಳೆಯರ ಕಾಂಪೌಂಡ್ ಓಪನ್ ಹಾಗೂ ಮಿಕ್ಸೆಡ್ ಟೀಮ್ ಕಾಂಪೌಂಡ್ ಓಪನ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ಭಾರತದ 6 ಸದಸ್ಯರ ಆರ್ಚರಿ ತಂಡದಲ್ಲಿದ್ದಾರೆ. 2023ರ ವರ್ಲ್ಡ್ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ ನಲ್ಲಿ ಬೆಳ್ಳಿ ಪದಕ ಹಾಗೂ 2022ರ ಏಶ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಎರಡು ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದ ಶೀತಲ್ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. 2023ರಲ್ಲಿ ಕೇಂದ್ರ ಸರಕಾರದಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News