ಪ್ಯಾರಿಸ್ ಒಲಿಂಪಿಕ್ಸ್| 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ಗೆ ಐತಿಹಾಸಿಕ ಕಂಚು
ಪ್ಯಾರಿಸ್: 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಈಗಾಗಲೇ 2 ಕಂಚಿನ ಪದಕ ಗೆದ್ದಿದ್ದ ಭಾರತ, ಗುರುವಾರ ಮತ್ತೊಂದು ಪದಕಕ್ಕೆ ಕೊರಳೊಡ್ಡಿದೆ.
ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಕಂಚಿನ ಪದಕ ಜಯಿಸಿದರು. ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಕುಸಾಲೆ ಮೂರನೇ ಸ್ಥಾನ ಪಡೆದರು.
50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಲಿಕೆಗೆ ಸ್ವಪ್ನಿಲ್ ಪಾತ್ರರಾದರು.
ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್ ವಿಭಾಗದಲ್ಲಿ ಮೂರು ಪದಕ ಗೆದ್ದಿರುವುದು ಇದೇ ಮೊದಲು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಕಂಚು ಗೆದ್ದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು. ನಂತರ ಮನು ಭಾಕರ್ ಹಾಗೂ ಸರಬ್‌ಜೊತ್ ಸಿಂಗ್ ಜೋಡಿ ಮಿಶ್ರ ತಂಡದ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದಿದ್ದರು. ಇದೀಗ ಶೂಟಿಂಗ್ ನಲ್ಲಿ ಸ್ವಪ್ನಿಲ್ ದೇಶಕ್ಕೆ ಮೂರನೇ ಪದಕ ತಂದು ಕೊಟ್ಟಿದ್ದಾರೆ.