ಪ್ಯಾರಿಸ್ ಒಲಿಂಪಿಕ್ಸ್ 2024| ಒಂದೇ ದಿನದಲ್ಲಿ ಮುಕ್ತಾಯಗೊಂಡ ಭಾರತದ ಟೆನಿಸ್ ಅಭಿಯಾನ

Update: 2024-07-29 12:13 GMT

ರೋಹನ್ ಬೋಪಣ್ಣ, ಎನ್‍.ಶ್ರೀ ರಾಮ್ ಬಾಲಾಜಿ  | PC : X 

ಪ್ಯಾರಿಸ್: ಸಿಂಗಲ್ಸ್ ಪಂದ್ಯದಲ್ಲಿ ಸುಮಿತ್ ನಗಲ್ ಹಾಗೂ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಎನ್‍.ಶ್ರೀ ರಾಮ್ ಬಾಲಾಜಿ ಜೋಡಿಯು ಕ್ರಮವಾಗಿ ತಮ್ಮ ಆರಂಭಿಕ ಪಂದ್ಯಗಳಲ್ಲಿ ಫ್ರಾನ್ಸ್ ಆಟಗಾರರರೆದುರು ರವಿವಾರ ಪರಾಭವ ಅನುಭವಿಸುವ ಮೂಲಕ ಭಾರತದ ಟೆನಿಸ್ ಅಭಿಯಾನಕ್ಕೆ ಒಂದೇ ದಿನದಲ್ಲಿ ತೆರೆ ಬಿದ್ದಿದೆ.

ಮೊದಲಿಗೆ ತಮ್ಮ ಪಂದ್ಯವನ್ನು ಆಡಿದ ಬಲಿಷ್ಠ ಬೇಸ್ ಲೈನ್ ಆಟಗಾರ ಸುಮಿತ್ ನಗಲ್ ಅವರ ಹೋರಾಟವು ಮಿಂಚಿನ ಆಟ ಪ್ರದರ್ಶಿಸಿದ ಕೊರೆಂಟಿನ್ ಮೌಟೆಟ್ ಎದುರು ಸಾಕಾಗಲಿಲ್ಲ. ಕೊರೆಂಟಿನ್ ಮೌಟೆಟ್ 3-1 ಅಂತರದ ಸೆಟ್ ಗಳ ಗೆಲುವು ಸಾಧಿಸಿದರು.

ರೊಲ್ಯಾಂಡ್ ಗ್ಯಾರೋಸ್ ನ ಅಂಕಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಸುಮಿತ್ ನಗಲ್, ಎರಡನೆ ಸೆಟ್ ನಲ್ಲಿ ಪ್ರತಿ ಹೋರಾಟ ಪ್ರದರ್ಶಿಸಿದರು. ಆದರೆ, ಮೂರನೆಯ ಸೆಟ್ ನಲ್ಲಿ 5-7 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದರು. ಸುಮಿತ್ ನಗಲ್ ಗೆ ಇದು ಎರಡನೆಯ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ.

ಎರಡು ಗಂಟೆ 28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-6, 6-4 ಹಾಗೂ 5-7 ಅಂತರದಲ್ಲಿ ಫ್ರಾನ್ಸ್ ಆಟಗಾರ ಕೊರೆಂಟಿನ್ ಮೌಟೆಟ್ ಎದುರು ಸುಮಿತ್ ನಗಲ್ ಮಂಡಿಯೂರಿದರು.

ನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಎನ್.ಶ್ರೀರಾಮ್ ಬಾಲಾಜಿ ಜೋಡಿಯು ಎಡೌರ್ಡ್ ರೋಜರ್-ವ್ಯಾಸೆಲಿನ್ ಹಾಗೂ ಗೇಲ್ ಮಾನ್ಫಿಲ್ಸ್ ಜೋಡಿಯೆದುರು 5-7, 2-6 ಅಂತರದಲ್ಲಿ ಪರಾಭವಗೊಂಡಿತು. ಆತಿಥೇಯ ತಂಡದ ಫೇಬಿಯನ್ ರೆಬೌಲ್ ಗಾಯಗೊಂಡಿದ್ದರಿಂದ ಈ ಪಂದ್ಯಾರಂಭದ ಕೊನೆಯ ಕ್ಷಣದಲ್ಲಿ ಗೇಲ್ ಮಾನ್ಫಿಲ್ಸ್ ಅವರ ಬದಲಿಗೆ ಕಣಕ್ಕಿಳಿದರು.

ಭಾರತವು ಇದುವರೆಗೆ ಟೆನಿಸ್ ವಿಭಾಗದಲ್ಲಿ ಕೇವಲ ಒಂದು ಒಲಿಂಪಿಕ್ಸ್ ಪದಕ ಮಾತ್ರ ಗಳಿಸಿದ್ದು, 1996ರ ಅಟ್ಲಾಂಟಾ ಗೇಮ್ಸ್ ನಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಗಳಿಸಿದ್ದೇ ಇಲ್ಲಿಯವರೆಗಿನ ಭಾರತದ ಪದಕ ಗಳಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News