ಪ್ಯಾರಿಸ್ ಒಲಿಂಪಿಕ್ಸ್| ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊಗೆ ಸತತ ಎರಡನೇ ಸೋಲು
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೋಮವಾರ ಸತತ ಎರಡನೇ ಪಂದ್ಯವನ್ನು ಸೋತಿರುವ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಗೇಮ್ಸ್‌ನಿಂದ ಸ್ಪರ್ಧೆಯಿಂದ ಬೇಗನೆ ನಿರ್ಗಮಿಸಿದರು.
ಸೋಮವಾರ 48 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಪಂದ್ಯದಲ್ಲಿ ವಿಶ್ವದ 4ನೇ ರ್ಯಾಂಕಿನ ಜಪಾನ್ ಜೋಡಿ ನಮಿ ಮಟ್ಸುಯಮಾ ಹಾಗೂ ಚಿಹಾರು ಶಿದಾ ಭಾರತೀಯ ಜೋಡಿಯನ್ನು 21-11, 21-12 ಗೇಮ್‌ಗಳ ಅಂತರದಿಂದ ಮಣಿಸಿತು.
ಅಶ್ವಿನಿ ಹಾಗೂ ತನಿಶಾ ರವಿವಾರ ಆಡಿರುವ ತಮ್ಮ ಮೊದಲ ಗ್ರೂಪ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಸೊ ಯೆಯೊಂಗ್ ಹಾಗೂ ಕಾಂಗ್ ಹೀ ಯೊಂಗ್ ವಿರುದ್ಧ ಸೋತಿದ್ದರು.
ಅಶ್ವಿನಿ ಹಾಗೂ ತನಿಶಾ ಸಿ ಗುಂಪಿನಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನೀಯರ ನಂತರ 3ನೇ ಸ್ಥಾನದಲ್ಲಿದ್ದಾರೆ. ಪ್ರತಿ ಗುಂಪಿನ ಅಗ್ರ ಎರಡು ಸ್ಥಾನ ಪಡೆದಿರುವ ಜೋಡಿಯು ಕ್ವಾರ್ಟರ್ ಫೈನಲ್‌ಗೆ ತಲುಪುತ್ತದೆ.
ಅಶ್ವಿನಿ ಹಾಗೂ ತನಿಶಾ ತಮ್ಮ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ಸೆಟ್ಯಾನಾ ಮಪಾಸಾ ಹಾಗೂ ಏಂಜೆಲಾ ಯೂ ಅವರನ್ನು ಎದುರಿಸಲಿದ್ದಾರೆ.
ಅಶ್ವಿನಿ ಹಾಗೂ ತನಿಶಾ ಮುನ್ನಡೆ ಪಡೆಯುವಲ್ಲಿ, ಗೇಮ್ ಅನ್ನು ಟೈ ಮಾಡುವಲ್ಲಿ ವಿಫಲರಾದರು. ಹೀಗಾಗಿ ಸ್ಕೋರ್‌ಬೋರ್ಡ್‌ನಲ್ಲಿ ತನ್ನ ಎದುರಾಳಿಗಳಿಗೆ ಯಾವುದೇ ರೀತಿಯ ಒತ್ತಡ ಹೇರಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ಜಪಾನ್ ಜೋಡಿಯು ಪಂದ್ಯದ ಆರಂಭದಲ್ಲಿ ಹಿಡಿತ ಸಾಧಿಸಿದ್ದು 4-0 ಮುನ್ನಡೆ ಸಾಧಿಸಿದರು. 2ನೇ ಗೇಮ್‌ನಲ್ಲೂ ಜಪಾನ್ ಆಟಗಾರ್ತಿಯರು 7-1 ಮುನ್ನಡೆ ಸಾಧಿಸಿ ಭಾರತೀಯ ಜೋಡಿಗೆ ಒತ್ತಡ ಹೇರಿದರು.